ಬದಕೆಂಬುದು ನಿಜವಾಗಿಯೂ ಇಷ್ಟೆನಾ ಎನಿಸಿಬಿಡುತ್ತೆ!!ಆದರೆ!!

ಜೀವನ ಎಂದರೇನು?ಸಂಬಂಧಗಳ ರಹಸ್ಯಗಳೇನು?ನಾನಂತು ಅರಿಯೆನು...

    ಆದರೆ ಈ ವಿಚಾರವಾಗಿ ಹಲವು ಬಾರಿ ತಿಳಿದುಕೊಳ್ಳುವ ಪ್ರಯತ್ನಪಟ್ಟಿರುವೆ.ಪಟ್ಟ ಪ್ರಯತ್ನಕ್ಕೆ ತಕ್ಕ ಫಲವಾಗಿ ಕೆಲ ವಿಚಾರಗಳ ತಿಳಿದುಕೊಂಡೆ. ಆ ವಿಚಾರಗಳು ಕೇವಲ ನನ್ನಲ್ಲೇ ಸುತ್ತದೆ ಪರರಿಗೂ ಹಂಚುವ ಆಸೆ ನನಗೆ.ನಾ ತಿಳಿದುಕೊಂಡ ವಿಚಾರಗಳು ಎಷ್ಟು ಸರಿ, ಎಷ್ಟು ತಪ್ಪು ಎನ್ನುವುದ ಅರಿಯೆನು.

        ನಾ ಮುಂದೆ ಹೇಳ ಹೋಗುವೆ ಕೆಲ ವಿಚಾರಗಳು.ಅದರಲ್ಲಿ ಹಲವು ನನ್ನ ಜೀವನದಿ ನಡೆದ ನಿಜ ಘಟನೆಗಳು. ಹಲವು ಅನುಭವದ ಮಾತುಗಳು.ನನಗೆ ಪದಸರಪಳಿಗಳ ಹುಟ್ಟುಹಾಕುವುದೆಂದರೆ ಅತಿ ಪ್ರೇಮ. ಪದಗಳ ಸುಂದರ ಸರಪಳಿಗಳಲಿ ನಾ ತಿಳಿದುಕೊಂಡ ವಿಚಾರಗಳ ನಿಮಗೆ ಸಾರುವೆನು ಇಂದು.

(ಚಿತ್ರ ಕೃಪೆ : ಅಂತರ್ಜಾಲ)


         ಈ ಸಂಬಂಧಗಳ ನಿಭಾಯಿಸುವ ರೀತಿ ಹೇಗೆ ಕೇಳಿದರೆ ಹಲವು ವಿಚಾರಗಳು ನನ್ನಲ್ಲಿವೆ.ಇದು ಅನುಭವದ ಮಾತು ಎಂದರೆ ಸುಳ್ಳಾಗದು.ಈ ಸ್ವಾರ್ಥ ಭಾವನೆ ಅತಿ ಕ್ರೂರ ಜಂತು.ಈ ಜಂತು ನಿನ್ನೊಳಗೆ ಸೇರಿದರೆ ನೀನು ನಿನ್ನವರನ್ನೇ ಕಳೆದುಕೊಳ್ಳುತ್ತೀಯ."ಆತ ನನ್ನನ್ನು ನೆನಪಿಸಿಕೊಳ್ಳುತ್ತಿಲ್ಲ, ಮತ್ತೆ ನಾ ಯಾಕೆ ನೆನಪಿಸಿಕೊಳ್ಳಲಿ ಆತನನ್ನು" ಈ ರೀತಿಯ ಸ್ವಾರ್ಥತೆಯ ಜಂತು ಹುಟ್ಟಿತು ಎಂದರೆ ಆ ಸಂಬಂಧಕ್ಕೆ ನೀ ಅಂತ್ಯ ಹಾಡಿದೆ  ಎಂದರ್ಥ.
  
        ಯಾವುದೇ ಸಂಬಂಧವನ್ನು ನಿಭಾಯಿಸಲು ಪ್ರಮಾಣಗಳು,ಹಣದ ಅವಶ್ಯಕತೆಗಳು ಇಲ್ಲ.ಈ ಸಂಬಂಧ ಅನ್ನೋ ಸುಂದರ ಬಾಂಧವ್ಯವನ್ನು ನಿಭಾಯಿಸಲು ಎರಡು ಅಂಶಗಳ ಒಳಗೊಂಡ ಎರಡು ಜೀವ ಸಾಕು.ಒಂದು ವಿಶ್ವಾಸ ಮಾಡುವ ಜೀವ,ಇನ್ನೊಂದು ಅದ ಅರ್ಥಮಾಡಿಕೊಳ್ಳುವ ಜೀವ.

         ಈ ನೋವು ಮತ್ತು ಶ್ರೀಮಂತಿಕೆಯ ನಡುವೆ ನನಗೆ ತಿಳಿದು ಬಂದಂತೆ ಅತಿ ಸೂಕ್ಷ್ಮ ರಹಸ್ಯ ಅಡಗಿದೆ.ಒಂದು ದಿನ ನೋವು ಶ್ರೀಮಂತಿಕೆಗೆ ನುಡಿಯಿತು "ನೀನು ಎಷ್ಟು ಪುಣ್ಯವಂತ, ಪ್ರತಿಯೊಬ್ಬರು ನಿನ್ನ ಪಡೆಯಲು ಬಯಸುತ್ತಾರೆ. ಆದರೆ ನಾನು ದುರದೃಷ್ಟ, ಎಲ್ಲರೂ ನನ್ನಿಂದ ದೂರ ಹೋಗಲು ಹಾತೊರೆಯುವರು". ಆಗ ಶ್ರೀಮಂತಿಕೆಯು ತನ್ನ ದುಃಖವನ್ನು ವ್ಯಕ್ತಪಡಿಸುತ್ತಾ ಹೇಳಿತು,"ಪುಣ್ಯವಂತ ನಾನಲ್ಲ ಮರಿ,ಅದು ನೀನು, ನಿನ್ನ ಪಡೆದು ಜನ ತನ್ನವರನ್ನ ನೆನಪಲ್ಲಿಟ್ಟುಕೊಳ್ಳುವರು ಆದರೆ ದುರದೃಷ್ಟವಂತ ನಾನು, ನನ್ನ ಪಡೆದಾಕ್ಷಣ ಜನ ತನ್ನವರನ್ನೇ ಮರೆತುಬಿಡುವರು. ಅರ್ಥಾತ್ ಸಂಬಂಧದ ಬೆಲೆಯನ್ನೇ ಕಳೆದುಕೊಳ್ಳುವರು.

    ಪ್ರಿಯ ಓದುಗ, ನಿಮಗೊಂದು ಕಿವಿಮಾತು ಹೇಳುವೆ ಕೇಳು,ಜೀವನದಲ್ಲಿ ಒಳ್ಳೆಯವರ ಹುಡುಕಾಟದಿ ಕಾಲ ಕಳೆಯಬೇಡ, ಬದಲಾಗಿ ನೀನೆ ಒಳ್ಳೆಯವನಾಗು,ನೀ ಒಳ್ಳೆಯವನಾದರೆ ಆ ತೋರ್ಪಡಿಕೆಯ ಪ್ರಯತ್ನ ಎಂದೂ ಮಾಡಬೇಡ. ಹಾಂ, ಇನ್ನೊಂದು ಮಾತು. ನೀ ಒಳ್ಳೆಯವನಾದೆ ಎಂದ ಮೇಲೆ ತೋರ್ಪಡಿಕೆಯ ಆ ಭಾವನೆಯೇ ನಿನ್ನಲ್ಲಿರದು ಎಂದು ನನ್ನ ನಂಬಿಕೆ.

(ಚಿತ್ರ ಕೃಪೆ : ಅಂತರ್ಜಾಲ)

      ಒಬ್ಬ ವ್ಯಕ್ತಿ ತನ್ನ ಅವಶ್ಯಕತೆಗಳಿಗಾಗಿ ಮಾತ್ರ ತನ್ನನ್ನು ಬಳಸಿದ,ನೆನಪಿಸಿಕೊಂಡ ಅಂತ ಎಂದಿಗೂ ಚಿಂತಿಸಬೇಡ ಬದಲಾಗಿ ಖುಷಿಯ ಅನುಭವ ಪಡೆಯಲೇಬೇಕು.ಕಾರಣ,ಕತ್ತಲಾವರಿಸಿದಾಗ ಮಾತ್ರ ಮೇಣದ ಬತ್ತಿಯ ನೆನಪಾಗಲು ಸಾಧ್ಯ.ಒಂದು ಜೀವ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದಾರಿಯ ಹುಡುಕಾಟಕ್ಕೆ ತಾನು ಕಾರಣನಾದೆ ಎಂದು ಆನಂದ ಪಡು.

       ನಾ ಹೇಳ ಹೋಗುವ ಮೂರು  ವ್ಯಕ್ತಿಗಳ ಜೀವನದಿ ಎಂದೂ ಮರೆಯಬೇಡ.ಒಂದು ಕಠಿಣಗಳಿಗೆಯಲ್ಲಿ ನಿನ್ನ ಜೊತೆ ಇದ್ದು, ಕತ್ತಲಿಗೆ ಬೆಳಕಾಗಿ ಆಸರೆ ತೋರಿದ ವ್ಯಕ್ತಿಯನ್ನು.ಎರಡನೆಯದು ಕಠಿಣಗಳಿಗೆಗೆ ನೀ ತೆರಳಿದಾಗ ನಿನ್ನಿಂದ ದೂರ ಹೋದವರನ್ನು. ಕೊನೆಯದಾಗಿ ನಿನ್ನನ್ನು ಆ ಸ್ಥಿತಿಗೆ ತಂದಿರಿಸಿದವರನ್ನು.
      
       ಒಬ್ಬರಿಗೆ ನೀನು ಒಳಿತನ್ನ ಬಯಸುವುದೇ ಆದರೆ,ಪರರಿಗೆ ಏನಾದರೂ ಕೊಡಲು  ಇಚ್ಛಿಸಿದರೆ ಅವರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡು. ಕ್ಷಣಕಾಲ ಜೊತೆಗೆ ಕಳಿ ಸಾಕು.ಯಾಕೆಂದರೆ ನೀ ಕೊಟ್ಟ ವಸ್ತುಗಳನ್ನ ನಿನಗೆ ಹಿಂತಿರುಗಿಸಿ ನೀಡಬಲ್ಲರು ಆದರೆ,ಜೊತೆಗೆ ಕಳೆದ ಕ್ಷಣ ಮತ್ತೆ ಸಿಗಲು,ಬರಲು,ಹಿಂತಿರುಗಿಸಲು ಅಸಾಧ್ಯ.
     
        ಇನ್ನೊಂದು ವಿಚಾರ ನೆನಪಿಗೆ ಬರುತ್ತಿದೆ.ಇದು ಒಂದು ವ್ಯಕ್ತಿಯ ಸಹಜ ವ್ಯಕ್ತಿತ್ವದ ವಿಚಾರ... ಒಂದು ದುಃಖ ನನ್ನನ್ನು ಆವರಿಸಿದರೆ ಅದನ್ನೇ ಮತ್ತೆ ಮತ್ತೆ ನೆನೆಯುತ್ತಾ ದುಃಖಿಸುವುದು. ಅದನ್ನೇ ಮತ್ತೆ ಮತ್ತೆ ನೆನೆಯುತ್ತಾ ಕೊರಗುವುದು.ಆದರೆ ಇದು ಎಷ್ಟು ಸರಿ ಎಂದು ಒಂದು ಅದ್ಭುತ ದೃಶ್ಯ ಕಂಡು ನನಗೆ ಅರಿವಿಗೆ ಬಂತು.ಒಂದು ದಿನ ತುಂಬಿದ ಸಭೆಯಲ್ಲಿ ನಾನು ಕುಳಿತುಕೊಂಡಿದ್ದೆ. ಹಾಸ್ಯಗಾರನೊಬ್ಬ ತನ್ನ ತುಂಟಾಟ,ನೋಟ,ಮಾತುಗಳಲ್ಲಿ ಸಭಿಕರನ್ನ ನಗುವಿನ ಸ್ವರ್ಗಕ್ಕೆ ಕರೆದುಕೊಂಡು ಹೋಗಿದ್ದ.ನನಗೂ ಆ ಸ್ವರ್ಗದ ಬಾಗಿಲು ತೆರೆದೇ ಇತ್ತು.ಆದರೆ ಆ ಸ್ವರ್ಗದಲ್ಲಿ ನನಗೆ ಅನುಭವಕ್ಕೆ  ಬಂತೊಂದು ಸುಂದರ ವಿಚಾರ. ಆ ಹಾಸ್ಯಗಾರ ಒಂದು ಹಾಸ್ಯ ಘಟನೆಯನ್ನು ಹೇಳಿದ. ಎಲ್ಲರೂ ಬಿಕ್ಕಿ ಬಿಕ್ಕಿ ನಕ್ಕರು.ಅದೇ ಘಟನೆಯನ್ನು ಮತ್ತೆ ಹೇಳಿದ,ಕೆಲ ಸಭಿಕರು ಮತ್ತೆ ನಕ್ಕರು.ಅವನು ಅದನ್ನೇ ಮೂರನೆ ಬಾರಿ ಹೇಳಿದ ಯಾರು ತಮ್ಮ ಭಾವನೆ ವ್ಯಕ್ತಪಡಿಸಲಿಲ್ಲ.ನಾ ತಿಳಿದುಕೊಂಡ ವಿಚಾರ ಇಷ್ಟೇ,ಒಂದು ಸಂತಸದ ವಿಚಾರವನ್ನ ಒಂದೆರಡು ಬಾರಿ ನೆನೆದು ಆನಂದಿಸುವ ನಾವು ದುಃಖದ ಪ್ರಸಂಗವನ್ನು ಮತ್ತೆ ಮತ್ತೆ ಎತ್ತಿ ಹಿಡಿದು ಕೊರಗುತ್ತೇವೆ.ಜೀವನಪೂರ್ತಿ ನೆನೆದು ಕೊರಗಿದವರು ನಮ್ಮೊಳಗಿರುವರು. ಇದಕ್ಕೆ ಕಾರಣಗಳೂ ಅರಿಯದಾಗಿದೆ ನನಗೆ.


    
          ಜೀವನದಲ್ಲಿ ನಿನಗೆ ಯಾರು ಒದಗಿ ಬರುವರು ಇದನ್ನ ಸಮಯ ತಿಳಿಸುವುದು.ಆದರೆ ನೀ ಯಾರನ್ನ ಬಯಸುವೆ ಇದನ್ನು ಕೇವಲ ನಿನ್ನ ಹೃದಯಕ್ಕೆ ನಿರ್ಧರಿಸಲು ಸಾಧ್ಯ.
   
          ಆತ್ಮೀಯರೆ,ನಾ ಮೊದಲೇ ತಿಳಿಸಿರುವೆ ನನಗೆ ಪದಸರಪಳಿಗಳ ಹುಟ್ಟುಹಾಕುವುದೆಂದರೆ ಅತಿ ಪ್ರೇಮ.ವಿಚಾರಧಾರೆಗಳ ಸುರಿಸುತ್ತಿದ್ದಂತೆ ಅಂತ್ಯ ಕಾಣದೆ ಅಕ್ಷಯಪಾತ್ರೆಯಿಂದ ಸುರಿಯುತ್ತಾ ಇವೆ.ಆದರೆ ಅಂತ್ಯವಿಲ್ಲದ ಮಾತಿಗೆ ವಿರಾಮ ಹಾಡುವುದು ಅನಿವಾರ್ಯವಾಗಿದೆ. ನನಗೆ ತಿಳಿದ,ನಾ ಅರಿತುಕೊಂಡ ವಿಚಾರಗಳ ಹಂಚುವ ಪ್ರಯತ್ನ ಮಾಡಿರುವೆ ನಾನು.ವಿಚಾರಧಾರೆಯ ಪದಪುಂಜಕ್ಕೆ ಇಲ್ಲಿಗೆ ವಿರಾಮ...


                                 -  ರಶ್ಮಿ ಎಚ್ ನಾಯಕ್
                                                    ಮಂಡ್ಯೂರ್

Comments

Post a Comment

Popular posts from this blog

"ಅಹಿಂಸಾ ಪರಮೋ ಧರ್ಮ" ಸರಿ. ಆದರೆ ಅದರ ಮುಂದಿನ ವಾಕ್ಯವನ್ನು ಪಾಲಿಸಲೂ ನಾವು ಸಿದ್ಧರೆಂಬುದನ್ನು ಮರೆಯಬೇಡಿ!!!

ಶಿವರಾತ್ರಿ ವಿಶೇಷ: ಮಹಾಶಿವ ಕಾಶಿಯಲ್ಲಿ ನೆಲಿಸಿದ್ದು ಯಾಕೆ??