ಶಿವರಾತ್ರಿ ವಿಶೇಷ: ಮಹಾಶಿವ ಕಾಶಿಯಲ್ಲಿ ನೆಲಿಸಿದ್ದು ಯಾಕೆ??
ಭದ್ರಶ್ರೇಣ್ಯನೆಂಬ ರಾಜನು ವಾರಣಾಸಿಯಲ್ಲಿ ರಾಜ್ಯವನ್ನಾಳುತ್ತಿದ್ದನು. ಆತನ ನೂರು ಮಕ್ಕಳನ್ನು ಕೊಂದು ಮಹಾಪರಾಕ್ರಮಿಯಾದ ದಿವೋದಾಸನು ವಾರಣಾಸಿಯನ್ನು ವಶಪಡಿಸಿಕೊಂಡನು. ಅದೇ ಸಮಯಕ್ಕೆ ಪಾರ್ವತಿಯನ್ನು ಮದುವೆಯಾಗಿ ಮಹಾದೇವರು ಅವಳ ಸಮಾಧಾನಕ್ಕಾಗಿ ಮಾವನ ಮನೆಯಾದ ಹಿಮಾಲಯದ ಗೌರೀಶಂಕರ ಶಿಖರದಲ್ಲಿಯೇ ಇದ್ದರು. ಶಿವಭಕ್ತರು ಅವರನ್ನು ಸಂತೋಷಪಡಿಸುವುದಕ್ಕಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇದರಿಂದ ಶಿವ-ಪಾರ್ವತಿಯರಿಗೆ ಸಂತೋಷವಾದರೂ ಪಾರ್ವತಿದೇವಿಯ ತಾಯಿಯಾದ ಮೇನೆಗೆ ಮಾತ್ರ ಈ ಶಿವಗಣದ ವೇಷಭೂಷಣ-ಲೀಲೆಗಳನ್ನು ನೋಡಿ ಅಸಹ್ಯವಾಗುತ್ತಲಿತ್ತು.
ಈ ಲೀಲೆಗಳನ್ನು ನೋಡಿ ಅವಳು ತನ್ನ ಮಗಳಾದ ಪಾರ್ವತೀದೇವಿಯಲ್ಲಿ, "ಪಾರ್ವತಿ ! ಇದೇನು ನಿನ್ನ ಗಂಡನ ವೇಷ! ಏನು ಅವನ ಈ ಅನಾಚಾರ ಪರಿವಾರ! ಅಷ್ಟದರಿದ್ರನಾದ ಇವನಿಗೆ ಶೀಲಸದಾಚಾರಗಳಂತೂ ಗೊತ್ತೇ ಇಲ್ಲ. ಇಶ್ಶ್! ಸಾಕಾಗಿದೆ ಇವನ ಈ ಡಂಭಾಚಾರ! ಹೆಸರು ನೋಡಿದರೆ ಮಹಾ ಈಶ್ವರ-ದೊಡ್ಡ ಸಾಹುಕಾರ. ಆದರೆ ತನಗೂ ಇರಲಿಕ್ಕೂ ಜಾಗವಿಲ್ಲದ ಜನ್ಮದರಿದ್ರ" ಎಂದು ಹೇಳಿ ಹಂಗಿಸುತ್ತಲಿದ್ದಳು. ಸ್ವಾಭಾವಿಕವಾಗಿ ಈ ಮಾತುಗಳನ್ನು ಕೇಳಿಸಿಕೊಂಡಾಗ ಮಹಾದೇವಿಗೆ ಸಿಟ್ಟು ಬಂತು. ಹಿಂದಿನ ಜನ್ಮದಲ್ಲಿ ತನ್ನ ಪತಿಯನ್ನು ನಿಂದಿಸಿದ ಕಾರಣದಿಂದಾಗಿ ತಂದೆ ದಕ್ಷನು ಹತನಾದ ವಿಚಾರವು ಆಗ ಅವಳ ನೆನಪಿಗೆ ಬಂತು. ಅದೇ ರೀತಿಯಾಗಿ ತನ್ನ ತಾಯಿಗೂ ಆಗಬಾರದು ಅನ್ನುವ ಕಾರಣಕ್ಕಾಗಿ ತನ್ನ ಸಿಟ್ಟನ್ನು ತೋರಿಸಿಕೊಳ್ಳದೇ ಪರಮೇಶ್ವರನ ಎದುರು ಮಂದಸ್ಮಿತಳಾಗಿ, "ದೇವ! ನನಗಿನ್ನು ಈ ತವರು ಮನೆಯ ವಾಸ ಸಾಕು. ಆದ್ದರಿಂದ ನಿಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋಗಿರಿ" ಎಂದು ಹೇಳಿದಳು. ಆಗ ಮಹಾದೇವರು ಪಾರ್ವತೀದೇವಿಯ ಪ್ರಾರ್ಥನೆಯಂತೆ ಭೂಲೋಕದಲ್ಲಿ ತನ್ನ ವಾಸಕ್ಕೆ ಯೋಗ್ಯಸ್ಥಳವಾಗಬಹುದೆಂದು ಯೋಚಿಸಿದನು. ಆಗ ಶಂಕರನಿಗೆ ಸಿದ್ಧಿಕ್ಷೇತ್ರವಾದ ವಾರಣಾಸಿಯೇ ಸರ್ವಾತ್ಮನಾ ತನಗೆ ಉಚಿತವಾದ ಆವಾಸ ಎಂದು ತೋರಿತು. ಶಿವನು ಗಣೇಶ್ವರನಾದ ನಿಕುಂಭನನ್ನು ಕರೆದು, "ನಿಕುಂಭ! ಕಾಶೀಪಟ್ಟಣವನ್ನು ನಮಗೆ ಇರಲಿಕ್ಕೆ ತೆರವು ಮಾಡಿಸು. ಈಗ ಅಲ್ಲಿ ದಿವೋದಾಸ ಎಂಬ ಮಹಾಪರಾಕ್ರಮಿ ವಾಸಿಸುತ್ತಿದ್ದಾನೆ. ಆದ್ದರಿಂದ ಮೃದುಮಾರ್ಗದಿಂದಲೇ ಉಪಾಯದಿಂದ ಆ ಕಾರ್ಯವನ್ನು ಸಾಧಿಸಬೇಕು" ಎಂದು ಹೇಳಿದನು. ಆಗ ಅತೀ ಚತುರನಾದ ನಿಕುಂಭನು ಕಾಶಿರಾಜನನ್ನು ಊರಿನಿಂದ ಹೊರಗೆ ಹಾಕಲು ಒಂದು ಬಹು ಚಮತ್ಕಾರವಾದ ಉಪಾಯವನ್ನು ರೂಪಿಸಿದನು.
ಕಂಡುಕ ಎಂಬ ಕ್ಷೌರಿಕ ಕಾಶೀಪಟ್ಟಣದಲ್ಲಿ ವಾಸಿಸುತ್ತಿದ್ದನು. ಗಣೇಶ್ವರನು ಅವನ ಕನಸಲ್ಲಿ ಬಂದು "ನನಗೆ ಈ ಊರಿನಲ್ಲಿ ಒಂದು ಗುಡಿ ಕಟ್ಟಿಸಿ ಅಲ್ಲಿ ನನ್ನ ಮೂರ್ತಿಯನ್ನು ಸ್ಥಾಪಿಸಿ ನಮ್ಮ ಪೂಜೆ ನಡೆಯುವಂತೆ ಮಾಡಿಸು. ಆಗ ನಾನು ನಿನಗೆ ಬೇಕಾದ ವರವನ್ನು ಕೊಡುತ್ತೇನೆ" ಎಂದು ಹೇಳುತ್ತಾನೆ. ಕ್ಷೌರಿಕನಾದ ಕಂಡುಕನು ತನ್ನ ಸ್ವಪ್ನದಲ್ಲಿ ಕಂಡ ವಿಚಾರಗಳನ್ನೆಲ್ಲಾ ತನ್ನ ರಾಜನಾದ ದಿವೋದಾಸನಲ್ಲಿ ಹೇಳಿದನು. ಆಗ ರಾಜನು ವಿಶಾಲವಾದ ದೇವಮಂದಿರವನ್ನು ನಿರ್ಮಿಸಿ ಅಲ್ಲಿ ಗಣೇಶ್ವರನನ್ನು ಪ್ರತಿಷ್ಠಾಪಿಸಿದನು. ಮತ್ತು ಪ್ರತಿನಿತ್ಯವೂ ಧೂಪದಿಂದ ನೈವೇದ್ಯ ಮಂಗಳಾರತಿ ವಾದ್ಯ ವೈಭವಗಳೂ ಒಳ್ಳೇ ಅದ್ಧೂರಿಯಿಂದ ನಡೆಯುವಂತೆ ಮಾಡಿದನು. ಇದರಿಂದ ಆ ದೇವಮಂದಿರ ಪ್ರಸಿದ್ಧವಾಯಿತು. ದೂರದೂರದ ಊರುಗಳಿಂದ ಬರುವ ಭಕ್ತರ ಸಂಖ್ಯೆ ಅಧಿಕವಾಯಿತು. ಅವರೆಲ್ಲರ ಇಷ್ಟಾರ್ಥಗಳನ್ನು ಗಣೇಶ್ವರನು ಪೂರೈಸುತ್ತಿದ್ದನು. ಇದರಿಂದ ಬಹಳ ಜಾಗೃತ ದೇವರು ಎಂದು ಭೂಲೋಕದಲ್ಲೆಲ್ಲಾ ಪ್ರಚಾರವಾಯಿತು. ಭಕ್ತರೂ ಸೇವಾ-ಭಜನೆಗಳನ್ನು ಪ್ರಾರಂಬಿಸಿದರು. ಅವರ ಈ ಸೇವಾಭಾವಕ್ಕೆ ಮೆಚ್ಚಿ ಗಣೇಶ್ವರನು ಅವರು ಬಯಸಿದ ಎಲ್ಲಾ ಫಲಗಳನ್ನು ಕಾಮಧೇನುವಿನಂತೆ ಈಯುತ್ತಲಿದ್ದ. ಹೀಗೆ ಸಾವಿರಾರು ಭಕ್ತರ ಅಪೇಕ್ಷೆಗಳನ್ನೆಲ್ಲಾ ಗಣೇಶನು ತಪ್ಪದೇ ಪೂರೈಸಿದ್ದನ್ನು ಕಂಡು ದಿವೋದಾಸ ಮಹಾರಾಜನು ತನ್ನ ಪಟ್ಟದರಸಿಯಾದ ಸುಯಶಾ ರಾಣಿಗೆ ಗಣೇಶನ ಸೇವೆ ಮಾಡಲು ಹೇಳಿದನು. ಆಗ ಮಹಾರಾಣಿಯು ಪ್ರತಿದಿನವೂ, ಹಗಲಿರುಳು ಎನ್ನದೇ, ಶರೀರದ ಪೇಲವ ಪ್ರಕೃತಿಯನ್ನೂ ಲಕ್ಷಿಸದೇ ದೇಹದಂಡನೆಯನ್ನೂ ಮಾಡುತ್ತಾ ಸಂತತಿಯ ಅಪೇಕ್ಷೆಯಿಂದ ಆ ಗಣನಾಥನ ಸೇವೆಯನ್ನು ಮಾಡಿದಳು. ಆದರೂ ಅವಳಿಗೆ ಫಲ ದೊರಕಲೇ ಇಲ್ಲ. ಎಷ್ಟೋ ದಿನಗಳು ಹೀಗೆ ಕಳೆದರೂ ಊರಜನರಿಗೆಲ್ಲಾ ಬೇಡಿದ ಫಲವನ್ನು ಕೊಡುತ್ತಲೇ ಇದ್ದರೂ ಆ ಗಣಪತಿಯು ರಾಣಿ ಒಬ್ಬಳಿಗೆ ಮಾತ್ರ ಫಲವನ್ನು ಕೊಡಲಿಲ್ಲ.
ಈ ವಿಚಾರದಿಂದ ಕಾಶೀರಾಜನಾದ ದಿವೋದಾಸನು ಕ್ರೋಧಾತಿರೇಕದಿಂದ "ಎಲ! ಇದಾವ ಪಿಶಾಚಿ ನಮ್ಮ ಊರಬಾಗಿಲದಲ್ಲಿ ಬಂದು ಕುಳಿತಿದೆ! ಊರಲ್ಲಿಯ ಸಾವಿರಾರು ಜನರಿಗೆಲ್ಲಾ ಬೇಡಿ ಬಯಸಿದ ಬೇಕುಬೇಕಾದ ಫಲಾಭೀಷ್ಟಗಳನ್ನು ಕೊಟ್ಟು ನನ್ನ ಪಾಲಿಗೆ ಮಾತ್ರ ಕಲ್ಲಾಗಿ ಕುಳಿತಿದೆ. ನಾನು ಇದನ್ನು ತಂದು ಗುಡಿ ಕಟ್ಟಿಸಿ ಪ್ರತಿಷ್ಠೆಯನ್ನೂ ಮಾಡಿ ಪ್ರತಿದಿನವೂ ಪೂಜಾ ನೈವೇದ್ಯ ಪುಷ್ಪಾರ್ಚನೆ ದೀಪ ಧೂಪ ಮುಂತಾದ ಎಲ್ಲ ವ್ಯವಸ್ಥೆ ಮಾಡಿಸಿದ್ದೇನೆ. ಗಂಡಹೆಂಡರಿಬ್ಬರೂ ಹಗಲೂರಾತ್ರಿ ಸೇವಿಸಿ ಪ್ರಾರ್ಥಿಸಿದರೂ ಈ ಕೃತಘ್ನ ಗಣೇಶನು ನಮಗೆ ಫಲವನ್ನು ಕೊಡುವುದಿಲ್ಲ. ಆದ್ದರಿಂದ ಸಾಕಿನ್ನು ಇವನ ಪೂಜೆ" ಎಂದು ಆ ಗಣಪತಿಯ ದೇವಸ್ಥಾನವನ್ನೂ ಮೂರ್ತಿಯನ್ನು ಕಿತ್ತು ಒಡೆದು ನಾಶಮಾಡಿ ಬಿಟ್ಟನು. ಇದರಿಂದ ಸಂತಪ್ತನಾದ ಆ ಗಣಪತಿಯು, "ಮದಾಂಧನಾದ ರಾಜಾಧಮ! ನಿನಗೆ ಯಾವ ಅಪರಾಧವನ್ನೂ ಮಾಡದ ನನ್ನ ದೇವಾಲಯವನ್ನು ನಾಶಪಡಿಸಿದ್ದರಿಂದ ನಿನ್ನ ರಾಜಧಾನಿಯಾದ ಕಾಶೀಪಟ್ಟಣವು ಒಂದು ಸಾವಿರ ವರುಷಗಳವರೆಗೆ ಶೂನ್ಯವಾಗಲಿ" ಎಂದು ಶಪಿಸಿದನು. ಅದರಿಂದ ಕಾಶೀಪಟ್ಟಣವು ಶೂನ್ಯವಾಗಿ ಜನರಹಿತವಾಯಿತು. ದಿವೋದಾಸನು ನಿರುಪಯನಾಗಿ ಊರು ಬಿಟ್ಟು ತನ್ನ ರಾಜ್ಯದ ಸೀಮಂತ ಪ್ರದೇಶದಲ್ಲಿದ್ದ ಗೋಮತೀ ನದಿಯ ದಂಡೆಯ ಮೇಲೆ ಮತ್ತೊಂದು ಭವ್ಯ ಅರಮನೆಯನ್ನು ಕಟ್ಟಿಸಿ ಅಲ್ಲಿ ಇರಹತ್ತಿದನು. ಇತ್ತ ನಿಕುಂಭನು ಶಿವನ ಬಳಿ ಬಂದು, "ಸ್ಥಾನ ಸಿದ್ಧವಾಗಿದೆ. ದಯಮಾಡಿಸಬೇಕೆಂದು" ಭಿನ್ನವಿಸಿಕೊಂಡನು.
ಪಾರ್ವತೀ ಸಹಿತನಾಗಿ ಪರಮೇಶ್ವರನು ಬಂದು ಕಾಶಿಯಲ್ಲಿ ಆನಂದದಿಂದ ವಾಸಮಾಡಿದರು. ಈ ಕಾಶಿಯ ವಾಸ ಮಹಾದೇವನಿಗೆ ಹಿತವೆನಿಸಿದರೂ ಪಾರ್ವತಿಗೆ ಮಾತ್ರ ತನ್ನ ಜನ್ಮಭೂಮಿ ತವರು ಮನೆಗಳನ್ನು ಬಿಟ್ಟು ಬಂದದ್ದರಿಂದ ಸ್ಥಳ ಬದಲಾಗಿ ಅವಳಿಗೆ ಸಮಾಧಾನವಾಗಲಿಲ್ಲ. ಆಗ ಅವಳು, "ಈ ಸ್ಥಳವೂ ಸಾಕು. ಮತ್ತೆ ನಾವು ನಮ್ಮೂರಾದ ಕೈಲಾಸಕ್ಕೆ ಹೋಗೋಣ ಬನ್ನಿ" ಎಂದು ಕೇಳಿಕೊಂಡಳು. ಆಗ ಪರಮೇಶ್ವರನು ನಕ್ಕು " ನಾನಿನ್ನು ನಿಮ್ಮ ತವರುಮನೆಗೆ ಬರುವುದಿಲ್ಲ. ಇದೇ ನನ್ನ ಅವಿಮುಕ್ತ ಸ್ಥಳ. ನಾನೆಂದಿಗೂ ಬಿಟ್ಟಿರಲಾರದ ಮನೆ ಇದು. ಬೇಕಾದರೆ ನಿನೂ ಇರು. ನಿಮ್ಮ ತವರುಮನೆಗೂ ಹೋಗಬಹುದು" ಎಂದು ತ್ರ್ಯಂಬಕನೂ ಆದ ಪರಶಿವನು ಉತ್ತರಿಸಿದನು. ಶಿವನು ಇದನ್ನು ಬಿಟ್ಟು ನಾನೆಲ್ಲಿಯೂ ಹೋಗುವುದಿಲ್ಲವೆಂದು ಹೇಳಿದ್ದರಿಂದ ಕಾಶಿಯು 'ಅವಿಮುಕ್ತ ಕ್ಷೇತ್ರ' ಎಂದು ಪ್ರಸಿದ್ಧವಾಯಿತು. ಹಿಂದಿನ ಮೂರೂ ಯುಗಗಳಲ್ಲಿ ಈ ಕ್ಷೇತ್ರದಲ್ಲಿದ್ದು ಪರಮೇಶ್ವರಿದೇವಿಯೊಡನಿದ್ದು ಕಲಿಯುಗದಲ್ಲಿ ಅದೃಶ್ಯನಾಗುತ್ತಾನೆ. ಆದರೂ ಅವನ ಸನ್ನಿಧಾನ ಅಲ್ಲಿ ಇದ್ದೇ ಇರುವುದು. ನಿಷ್ಕಲ್ಮಶ ಭಕ್ತಿಯ ಪ್ರಾರ್ಥನೆಗೆ ಭಗವಂತನಾದ ಶಂಕರ ಒಲಿದೇ ಒಲಿಯುವನು..
ಆಧಾರ : ಸ್ಕಂದಪುರಾಣ
ಕೃಪೆ : ತುಷಾರ (ಜನವರಿ 2018)
- ಜಯದೇವ ಹಿರಣ್ಯ
Comments
Post a Comment