ಅಸುರಕ್ಷಿತರು ಭಾಗ - 1 : ಅನೇಕ ಬಾರಿ ನಮ್ಮ ಮಿತ್ರನೂ ಶತ್ರುವಾಗಬಲ್ಲ.. ನೆನಪಿಡಿ!!!
ನಾವು ಮನೆಯಲ್ಲಿದ್ದರೆ ಸುರಕ್ಷತೆಯ ಭಾವ ನಮ್ಮ ಮನದಲ್ಲಿ ಮೂಡುವುದು ಸುಳ್ಳಲ್ಲ. ನಮ್ಮ ಬೇಕು-ಬೇಡಗಳನ್ನು ಅರ್ಥೈಸಿ, ನಮ್ಮನ್ನು ಆದಷ್ಟು ಖುಷಿಯಲ್ಲಿರುವಂತೆ ಸದಾ ಕಣ್ಣನ್ನು ರೆಪ್ಪೆ ಸದಾ ಕಾಯುತ್ತಿರುವಂತೆ ಕಾಯುತ್ತಾ ಪೋಷಿಸುವ ವ್ಯಕ್ತಿಗಳು ಮನೆಯಲಿದ್ದಾರೆ ಅನ್ನುವ ಕಾರಣಕ್ಕೆ. ಆದರೆ ಈ ಭಾವ ಮಾತ್ರ 21 ನೆಯ ಶತಮಾನದ ಆದಿಯಲ್ಲೇ ಅಂತ್ಯವಾಗುತ್ತಾ ಅನ್ನುವ ಭಾವವೂ ಕಾಡುತ್ತಿದೆ. ಅದಕ್ಕೇ ಕಾರಣಗಳೂ ಇವೆ. ನನ್ನ ಸ್ನೇಹಿತನೋರ್ವ 3-4 ವರ್ಷಗಳ ಹಿಂದೆ ಒಂದು ಮಾತನ್ನು ಹೇಳಿದ್ದು ಇವತ್ತೂ ನನ್ನ ಮನದಿಂದ ಅಳಿಸಿಲ್ಲ. "ಅಲ್ಲ ಮಾರಾಯಾ.. ನನಗೆ ಈ ಗೂಗುಲ್ಲು ತಾಯಿಯ ಭಾವ ಮೂಡಿಸುತ್ತಿದೆ. ನನ್ನ ಬೇಕು-ಬೇಡಗಳನ್ನು ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡಿದೆ. ನಾನು ಬೇಕು ಅಂದ ತಕ್ಷಣ ಮನೆಯ ಬಾಗಿಲಿಗೆ ತಂದು ಕೊಡುತ್ತೆ..ನಾನು ಬೇಡ ಅಂದ ತಕ್ಷಣ ಇತರೆ ಸಲಹೆಗಳನ್ನು ನೀಡುತ್ತೆ! ಒಂಥರಾ ಕೃತಕ ತಾಯಿಯ ರೀತಿ ವರ್ತಿಸುತ್ತಿದೆ ಅಲ್ಲವಾ??" ಎಂದ. ಆತ ಹೇಳಿದ್ದೆಲ್ಲವೂ ಸತ್ಯ ಎಂಬ ಭಾವವುಂಟಾಗಿ ನನ್ನ ಮಾತುಗಳೆಲ್ಲವೂ ಆ ದಿನ ಮೌನವಾಗಿದ್ದವು.
ಈ ಅಂತರ್ಜಾಲವೊಂದು ಪರಿಚಿತವಾದ ನಂತರದಿಂದ ಜಗತ್ತು ಮೊದಲಿಗಿಂತ ಅತೀ ಹೆಚ್ಚು ಆತಂಕದಿಂದ ಜೀವಿಸುತ್ತಿರುವುದು ಮಾತ್ರ ಸ್ಪಷ್ಟವಾಗುತ್ತಿದೆ. ನಮ್ಮ ಬಾಲ್ಯದ ಜೀವನದಲ್ಲಿ ಸಂಜೆ ಸಮಯದಲ್ಲಿ ಗೆಳೆಯರೊಡನೆ ಗದ್ದೆಗೆ ಹೋಗಿ ಕ್ರಿಕೆಟ್, ಕುಟ್ಟಿದೊಣ್ಣೆ ಆಡಿ, ನಂತರ ಒಟ್ಟಿಗೆ ತಿಂಡಿ ತಿಂದು ಮನೆಗೆ ಹಿಂತಿರುಗುತ್ತಿದ್ದೆವು. ನಾವು ಆಡುವುದಕ್ಕಾಗಿ ಶಾಲೆಗೆ ರಜೆ ಸಿಗುವುದನ್ನು ಕಾಯುತ್ತಿದ್ದ ಕಾಲವೊಂದಿತ್ತು. ಆದರೆ ಕಾಲಾಯ ತಸ್ಮೈ ನಮಃ ಎಂಬ ಮಾತೊಂದಿದೆಯಲ್ಲಾ!!
21ನೆಯ ಶತಮಾನದ ಆರಂಭದ ಕಾಲದಿಂದಲೂ ಪ್ರಾರಂಭವಾಯಿತು ಅಂತರ್ಜಾಲದ ಕಾಲ. ಆಡಲು ಚೆಂಡಿಗಾಗಿ ಅಳುತ್ತಿದ್ದ ಮಕ್ಕಳು ಮೊಬೈಲಿಗಾಗಿ ಅಳಲು ಪ್ರಾರಂಭಿಸಿದರು. ವಾರಕ್ಕೊಮ್ಮೆ ಮಕ್ಕಳನ್ನು ಸುಂದರ ವಾತಾವರಣವಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುತ್ತಿದ್ದ ಪೋಷಕರೂ ಈಗ ಅದಕ್ಕೆಲ್ಲಾ ಸಮಯವಿಲ್ಲವೆಂದು ಗೋಳಾಡುತ್ತಿರುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕಾರಣ ಬ್ಯುಸಿ ಅಲ್ಲ: ಬದಲಾಗಿ ಸಾಮಾಜಿಕ ಜಾಲತಾಣಗಳು, ಅಂತರ್ಜಾಲ, ಅಗತ್ಯವಿಲ್ಲದ ಕಾರ್ಯದಲ್ಲಿ ಅತಿಯಾಗಿ ತೊಡಗಿ, ಅಂತಹದ್ದರನ್ನೇ ಮಕ್ಕಳಿಗೂ ಉಣಬಡಿಸಿ ಸಂತೃಪ್ತಿ ಹೊಂದುವ ಮನೋಭಾವ ಅತಿಯಾದುದಷ್ಟೇ..
(ಸಾಂದರ್ಭಿಕ ಚಿತ್ರ - ಕೃಪೆ : ಅಂತರ್ಜಾಲ)
ಅಲ್ಲಿಗೆ ಒಂದಂತೂ ಸ್ಪಷ್ಟವಾಯಿತು.. ಅಂತರ್ಜಾಲ ನಮ್ಮ ತಾಯಿಯೂ ಆದಳು, ನಮ್ಮ ಗೆಳೆಯನೂ ಆದ. ಗೂಗುಲ್ ಇಲ್ಲದೇ ಜೀವನ ನಡೆಸಲು ಕಷ್ಟವೆಂಬ ಕಾಲ ಪ್ರಾರಂಭವಾಯಿತೆನ್ನಬಹುದೇನೋ?? ಅರಿಯದು. ಆದರೆ ಆ ಭಾವ ಉಂಟಾಗಿದ್ದು ಮಾತ್ರ ನಿಜ. ಫೇಸ್ ಬುಕ್ , ವಾಟ್ಸ್ ಆಪ್ ಪರಿಚಯವಾದ ಮೇಲಂತೂ ಅದುವೇ ಜಗತ್ತು. ನಮ್ಮ ಸಂಬಂಧಿಕರೊಡನೆ ನಮ್ಮ ಸುಖ-ದುಃಖಗಳನ್ನು ಫೋನಿನಲ್ಲಿ ಮಾತನಾಡುವುದನ್ನು ಸ್ಥಗಿತವಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ "ನಾನು ಹೊಸ ಕಾರು ಖರೀದಿಸಿದೆ, ನನ್ನ ಇವತ್ತು ಬೆಳಿಗ್ಗಿನ ತಿಂಡಿ ಪಿಝ್ಜಾ , ಬರ್ಗರ್, ನಾನು ನಾಯಿಮರಿಯೊಂದಿಗೆ ಸಂಜೆ ಕಳೆದೆ, ತಾಜ್‍ಮಹಲ್ ಸೌಂದರ್ಯ ಸವಿಯುತಿದ್ದೇನೆ-ನನಗೂ ಇಂತಹದ್ದನ್ನು ನಿರ್ಮಿಸಬೇಕೆಂಬ ಆಸೆ" ಎಂದೆಲ್ಲಾ ಹಂಚುವ ಮನೋಭಾವ ಆತಿಯಾಯಿತು. ಅದನ್ನು ಎಷ್ಟು ಜನ ಲೈಕು, ಕಮೆಂಟು ಮಾಡಿದರೆಂಬ ಕುತೂಹಲ. ಲೈಕುಗಳಿಗಾಗಿ ಕಾತರ.
ಒಟ್ಟಾರೆಯಾಗಿ ನಮ್ಮ ಮಿತ್ರರೊಂದಿಗೆ ನಮ್ಮ ಕಥೆಗಳನ್ನು ತಿಳಿಸಿದ್ದೇವೆಂಬ ಖುಷಿ ನಮ್ಮದು. ಆದರೆ ನಾವು ಹೇಳಿದ ಎಲ್ಲಾ ಸಂಗತಿಗಳು , ಮಾಹಿತಿಗಳು ಇನ್ನೊಬ್ಬರ ಹಣದ ಮೂಲವೂ ಆಗುತ್ತಿದೆ ಎಂಬುದನ್ನು ಗಮನಿಸುತ್ತಿಲ್ಲ ಅಷ್ಟೇ. ಕೆಲವು ಬಾರಿ ನಮ್ಮ ಜೀವನಮಿತ್ರ ಶತ್ರುವಾಗಬಹುದು ಇದೇ ಮಾಹಿತಿಗಳಿಂದ ಎನ್ನುತ್ತಿರುವುದೂ ಇದೇ ಕಾರಣಕ್ಕೆ. ನಮ್ಮಿಂದ ಇನ್ನೊಬ್ಬರಿಗೆ ಸಹಾಯವಾದರೆ ಅದು ಉತ್ತಮವಲ್ಲವೇ ಎಂದು ಪ್ರಶ್ನಿಸಬೇಡಿ ಮತ್ತೆ.!! ನಿಮ್ಮ ಅಂತ್ಯವೂ ಅದೇ ಮಾಹಿತಿಗಳಿಂದ ಆಗಬಹುದು ಜೋಕೆ!!!
" ನೀವು ಎಲ್ಲಿದ್ದೀರಿ ಎಂಬುದು ನಮಗೆ ಅರಿವಿದೆ. ಮೊದಲು ಎಲಿದ್ದಿರಿ ಎಂಬುದೂ ಗೊತ್ತಿದೆ. ನೀವು ಏನನ್ನು ಆಲೋಚಿಸಬಲ್ಲಿರಿ ಎಂಬುದನ್ನೂ ಹೆಚ್ಚು ಕಡಿಮೆ ಸರಿಯಾಗಿ ಹೇಳಬಲ್ಲೆವು " ಎಂದಿದ್ದರು ಗೂಗಲ್‍ನ ಮಾಜಿ ಕಾರ್ಯನಿರ್ವಾಹಕದ ಅಧ್ಯಕ್ಷರಾಗಿದ್ದ ಎರಿಕ್. ಇದು 2010 ರ ಮಾತು. ಎಲ್ಲಾ ಮಾಹಿತಿಗಳನ್ನು ಸುರಕ್ಷಿತವಾಗಿಸುತ್ತೇವೆಂದು ತಮ್ಮನ್ನು ತಾವು ಸಮರ್ಥಿಸುವ ಮಾತನ್ನಾಡಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅದೆಷ್ಟು ಬದಲಾಗಿ ಹೋಯಿತು ಈ ವ್ಯವಸ್ಥೆ.
ಇತ್ತೀಚೆಗೆ ಫೇಸ್ಬುಕ್‍ನ 50 ಮಿಲಿಯನ್ ಜನರ ವೈಯ್ಯುಕ್ತಿಕ ಮಾಹಿತಿಗಳನ್ನು ಒಂದು ಅನಾಲಿಟಿಕ್ ಸಂಸ್ಥೆ ಬಹಿರಂಗಪಡಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದಾದರೆ ನಮ್ಮ ಮಾಹಿತಿಗಳು ಅದೆಷ್ಟು ಸುರಕ್ಷಿತ ಎಂಬುದನ್ನು ಚಿಂತಿಸಬೇಕಾಗಿದೆ. ಅಂತರ್ಜಾದಲ್ಲಿ ಯಾವ ರೀತಿಯ ಸಹಾಯ ಬೇಕಾದರೂ ನಮ್ಮ ಎಲ್ಲಾ ಮಾಹಿತಿಗಳನ್ನು ನಾವು ಒದಗಿಸಬೇಕಾಗುತ್ತದೆ. ನಮೋ ಆಪ್ 22 ಕಾಲಮ್ನಲ್ಲಿ ವಿವಿಧ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಇದು ಒಂದು ಉದಾಹರಣೆಯಷ್ಟೇ. ಇಂತಹ ಮಾಹಿತಿಗಳನ್ನು ಆಧರಿಸಿ, ಜನರ ಇಷ್ಟಗಳನ್ನು ತಿಳಿದು ಆ ಮಾಹಿತಿಗಳನ್ನು ಚುನಾವಣಾ ಪ್ರಚಾರಕ್ಕೂ ಬಳಸಲಾಗುತ್ತಿದೆ. ಇತ್ತೀಚೆಗೆ ನಡೆದ ಅಮೆರಿಕಾ ಚುನಾವಣೆ ಇದಕ್ಕೆ ಜ್ವಲಂತ ಉದಾಹರಣೆ.
(ಸಾಂದರ್ಭಿಕ ಚಿತ್ರ- ಕೃಪೆ : ಅಂತರ್ಜಾಲ)
ಯಾರೊಂದಿಗೂ ನಿಮ್ಮ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂಬುದಾಗಿ ಭರವಸೆ ನೀಡಿ ಅಂತಿಮವಾಗಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿ ಸುಮಾರು 87 ಮಿಲಿಯನ್ ಜನರ ಮಾಹಿತಿಗಳನ್ನು ಹಂಚಿ ಅದರಲ್ಲೂ ಕೋಟಿ ಕೋಟಿ ಹಣ ಮಾಡಿದರಲ್ಲಾ ಫೇಸ್ ಬುಕ್??ನಮ್ಮ ಮಿತ್ರನ ಅಸಲಿಯತ್ತಿದು. ಜಿಯೋ ಬಳೆಕೆದಾರರ ಮಾಹಿತಿಗಳು, ಫೋನ್ ನಂಬರ್, ಈಮೇಲ್ ಮುಂತಾದ ಮಾಹಿತಿಗಳು ಕೂಡ "ಮೇಗಿಕೇಪ್ಕ್" ಅನ್ನುವ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಂಡಿದ್ದವು. ಇದಾದ ಕೆಲವೇ ಕ್ಷಣಗಳಲ್ಲಿ ಆ ತಾಣವನ್ನೂ ಮುಚ್ಚಲಾಯಿತು. ಆದರೆ ಮಾಹಿತಿಗಳು ಇನ್ನಿತರ ತಾಣಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಬಹಿರಂಗವಾಗುತ್ತಲೇ ಇವೆ ಎಂಬುದು ಮಾತ್ರ ದುರಂತದ ಸಂಗತಿ. ಗಂಭೀರವಾಗಿ ಚಿಂತಿಸಬೇಕಾದ ಪ್ರಶ್ನೆಗಳಿವು.
ಸುಮಾರು 17 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಜೊಮಟೊ ಅನ್ನುವ ಒಂದು ಆಹಾರ ಮನೆಮನೆಗೆ ಸರಬುರಾಜು ಮಾಡುವ ಒಂದು ಆಪ್ ಬಳಕೆದಾರರ ಪಾಸ್ ವಾರ್ಡ್ ಸುರಕ್ಷಿತವಾಗಿವೆ ಎಂದು, ನಂತರ ತಮ್ಮ ತಮ್ಮ ಪಾಸ್ ವಾರ್ಡ್ ಬದಲಾಯಿಸಲು ಸೂಚಿಸಿತ್ತು. ಕಾರಣ ಅಷ್ಟೇ ಸ್ಪಷ್ಟ. ಸಿಐಎಸ್ ನೀಡಿದ ವರದಿಯ ಪ್ರಕಾರ 135 ಮಿಲಿಯನ್ ನಷ್ಟು ಜನರ ಆಧಾರ್‍ನಲ್ಲಿದ್ದ ಮಾಹಿತಿಗಳು ಕೂಡ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದವು. ಅದೂ ಸರಕಾರದ ವೈಬ್ಸೈಟ್ ನಲ್ಲಿ ಮಾತ್ರ ದಾಖಲಾಗಿದ್ದ ಮಾಹಿತಿಗಳು. ಹಾಗಾದರೆ ನಮ್ಮ ಮಾಹಿತಿಗಳು ಎಲ್ಲಿ ಸುರಕ್ಷಿತ??!!
ನಮ್ಮ ಮನೆಯವರಿಗೆ, ಮಿತ್ರರಿಗೆ ಮಾತ್ರ ತಿಳಿಯುತಿದ್ದ ಮಾಹಿತಿಗಳು ಈಗ ಜಗಜ್ಜಾಹೀರು ಮಾಡಿ, ಶತ್ರುಗಳನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ನಮ್ಮ ಇಷ್ಟಾರ್ಥಗಳು ದೇವರಿಗೆ ಮಾತ್ರವಲ್ಲ ಗೂಗುಲ್ ಗೂ ಅರಿವಾಗಿ ಹೋಯಿತು. ನೀವು ಯಾವ ವಿಚಾರದ ಕುರಿತಾಗಿ ಗೂಗುಲ್ನಲ್ಲಿ ಹುಡುಕುತ್ತೀರೋ, ಕೆಲವು ನಿಮಿಷಗಳ ನಂತರ ನಿಮಗೆ ಅಗತ್ಯವೆನಿಸುವ ವಿಚಾರಗಳ ಕುರಿತಾಗಿ ಜಾಹಿರಾತು ನಿಮ್ಮ ಎದುರಿಗೆ ಕಾಣಿಸಿಕೊಳ್ಳುತ್ತದೆ. ಇದು 21ನೆಯ ಶತಮಾನದ ದೇವರು!!! ಗೂಗುಲ್ ದೇವರು. ಹಾರ್ವಾರ್ಡ್ ವಿಶ್ವವಿದ್ಯಾಲಯಲ್ಲಿ ಉಪನ್ಯಾಸಕರಾಗಿರುವ ಬ್ರೂಸ್ ತಮ್ಮ ಪುಸ್ತಕವಾದ "ಡಾಟಾ ಆಂಡ್ ಗೋಲಿಯತ್" ನಲ್ಲಿ ಒಂದು ಮಾತನ್ನು ಉಲ್ಲೇಖ ಮಾಡುತ್ತಾರೆ. "ಯಾವ ರೀತಿಯಾದ ಆಶ್ಲೀಲತೆಗಳನ್ನು ನಾವು ಗೂಗಲ್ನಲ್ಲಿ ಹುಡುಕುತ್ತೇವೆಂದು ಅದಕ್ಕೆ ಅರಿವಿದೆ,ಯಾವ ಹಳೆಯ ಪ್ರೇಯಸಿಯ ಕುರಿತಾಗಿ ಚಿಂತಿಸುತ್ತೇವೆಂದು ಗೊತ್ತಿದೆ, ನಮ್ಮ ಚಿಂತೆಗಳು, ಕಳವಳಗಳು, ರಹಸ್ಯಗಳು ಎಲ್ಲವೂ!!!"
(ಸಾಂದರ್ಭಿಕ ಚಿತ್ರ - ಕೃಪೆ: ಅಂತರ್ಜಾಲ)
ಇದು ಸಾಮಾಜಿಕ ಜಾಲತಾಣದ ಸಮಸ್ಯೆ ಮಾತ್ರವಲ್ಲ. ನಾವು ಉಪಯೋಗಿಸುವ ಸಣ್ಣ ಸಣ್ಣ ಆಪ್ ಗಳದ್ದೂ ಕೂಡ. ಭಜನೆ, ಸಂಗೀತ, ಆಟಗಳ ಆಪ್ ಇತ್ಯಾದಿ. ಸಾಮಾನ್ಯವಾಗಿ ಇಂತಹ ಆಪ್ ಗಳಿಗೆ ಆದಾಯವಿರುವುದಿಲ್ಲ. ಅದಕ್ಕಾಗಿ ಮಾಹಿತಿಗಳನ್ನು ಉಪಯೋಗಿಸಿ ಆದಾಯ ಗಳಿಸುತ್ತವೆ ಎನ್ನತ್ತಾರೆ ಅವಲಾನ್ಸ್ ಗ್ಲೋಬಲ್ ಸೊಲುಶನ್ಸ್ ಸ್ಥಾಪಕರಾದ ಮಾನ ಶಾ. ಅವುಗಳಿಗೆ ಲಭಿಸಿದ ಮಾಹಿತಿಗಳ ಆಧರಿಸಿ ನಿಮ್ಮ ಬೇಕುಗಳನ್ನು ಅವು ಈಡೇರಿಸುತ್ತವೆ. ಆ ಮೂಲಕ ಆ ತಾಣದಲ್ಲಿ ಅತೀ ಹೆಚ್ಚು ಕಾಲ ಕಳೆಯುವಂತೆ ಮಾಡುತ್ತವೆ. ಒಟ್ಟಾರೆಯಾಗಿ ಮಾಹಿತಿ ಮಾಫಿಯಾ ಬಹಳ ಜೋರಾಗಿಯೇ ಸದ್ದಿಲ್ಲದೆಯೇ ನಡೆಯುತ್ತಿರುವುದು ಗಾಬರಿಯ ಸಂಗತಿ.
ಅನೇಕ ಬಾರಿ ಒಂದು ಆಪ್ ಉಪಯೋಗಿಸಿದಾಗ ಕೆಲವು ಷರತ್ತುಗಳನ್ನೂ ಅವ್ವು ನೀಡುತ್ತವೆ. ನಾವು ಅವುಗಳನ್ನು ಓದದೆಯೇ ಎಗ್ರೀ ಎಂಬುದಾಗಿ ಸೂಚಿಸಿಬಿಡುತ್ತೇವೆ. ಆ ಷರತ್ತುಗಳಲ್ಲಿ ಯಾವ ರೀತಿಯಾದ ವಿಚಾರಗಳು ಒಳಗೊಂಡಿದ್ದವು ಎಂಬುದನ್ನು ಅರಿತೇ ಇರುವುದಿಲ್ಲ. ನಮ್ಮ ವೈಯ್ಯುಕ್ತಿಕ ಮಾಹಿತಿಗಳು ಸೋರಿಕೆಯಾಗುವುದಕ್ಕೆ ಇದೂ ಒಂದು ಕಾರಣವಾಗುತ್ತದೆ. ಇವತ್ತಿನ ಜಗತ್ತಿನ ಆತಂಕ ಇದುವೇ..
ಲಇವತ್ತಿನ ಟ್ರೆಂಡ್ ಆಗಿಬಿಟ್ಟಿದೆ ಈ ಮಾಫಿಯಾ. ಅದೆಷ್ಟು ಹೆಚ್ಚು ಮಾಹಿತಿಗಳನ್ನು ನೀವು ಸಂಗ್ರಹಿಸುತ್ತೀರಿ ಎಂಬುದು. ಅದು ತಕ್ಷಣ ಉಪಯೋಗಕ್ಕೆ ಬರಬೇಕೆಂದೇನಿಲ್ಲ. ಭವಿಷ್ಯದಲ್ಲಿ ಒಂದು ದಿನ ಅಥವಾ ಇತರೆ ವ್ಯಕ್ತಿಗಳಿಗೂ ಅಗತ್ಯ ಬೀಳಬಹುದು. ನಿಮ್ಮ ಮಾಹಿತಿಗಳು ನಿಮ್ಮ ಅಂತ್ಯಕ್ಕೂ ಕಾರಣವಾಗಬಹುದೆಂದು ಆಗ ಉಲ್ಲೇಖ ಮಾಡಿದ್ದು ಇದೇ ಕಾರಣಕ್ಕೆ. ನಾವು ಮಿತ್ರನೆಂದು ತಿಳಿದು ವ್ಯವಹರಿಸುತ್ತಿದ್ದೇವೆ. ಆದರೆ ವಾಸ್ತವ ಅಂಶ ಬೇರೆಯದೇ ಇದೆ ಎನ್ನುವುದು ನಮಗೆ ಗೊತ್ತಿರಲಿ..(ಮುಂದುವರಿಯುವುದು)..
ನೆನೆಪಿಡಿ : ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ನಿಜ, ಆದರೆ, ಚಿಂತಿಸದೇ ಫಲ ಬೇಕೆಂದರೆ ಹ್ಯಾಗೆ??
- ಜಯದೇವ ಹಿರಣ್ಯ
ReplyDeleteOne of the best article.
Thank u for giving awareness about network sites