ಜಗದ ಹಿತವನ್ನು ಕಾಪಾಡುವ ಹಿಂದುತ್ವವನ್ನು ರಕ್ಷಿಸುವ ಬದ್ಧತೆ ನಮಗಿಲ್ಲವಾದರೆ!!!??

ತೀರಾ ಹೇಳಲೇಬೇಕೆಂದರೆ, ಈ ಹಿಂದುತ್ವ ಎಂಬುವುದೊಂದು ಸೆಳೆತವೊಂದಿದೆಯಲ್ಲವಾ?! ಅಷ್ಟು ಸುಲಭಕ್ಕೆ ಎಡತಾಕುವ ದೈವತ್ವವಲ್ಲವದು! ಅನುಷ್ಠಾನ, ಬದ್ಧತೆಯ ಮೂಲಕ ಹಂತ ಹಂತವಾಗಿ ಆತ್ಮಕ್ಕೆಳೆದುಕೊಳ್ಳುವ ಆಪೋಷನ! ಹಿಂದುತ್ವವೆಂಬುವುದನ್ನೇ ಸೈದ್ಧಾಂತಿಕಗಾಗಿ ಅನುಷ್ಟಾನಕ್ಕಿಳಿಸುವ ಕಾರ್ಯವೂ ಅಷ್ಟೇ ಬದ್ಧತೆಯನ್ನು ಬೇಡುತ್ತದೆ! ಅಷ್ಟೇ ತ್ಯಾಗವನ್ನೂ ಬೇಡುತ್ತದೆ!

ಹಿಂದೂರಾಷ್ಟ್ರದ ಪರಿಕಲ್ಪನೆಯನ್ನಿಟ್ಟುಕೊಂಡು ರಾಷ್ಟ್ರಕ್ಕೆ ಉನ್ನತ ಕೊಡುಗೆ ನೀಡುತ್ತಿರುವ ಹಿಂದೂ ಸಂಘಟನೆಗಳಿಗೆ ಲೆಕ್ಕವಿಲ್ಲವೆನ್ನುವುದು ನಿಜವಾದರೂ, ಉಗ್ರರಾಷ್ಟವಾದದ ತಳಹದಿಯ ಮೇಲೆ ಭದ್ರ ಕೋಟೆಯನ್ನು ಕಟ್ಟಿದ್ದು ವಿಶ್ವ ಹಿಂದೂ ಪರಿಷತ್! 

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಜನ್ಮತಳೆದ ವಿಶ್ವ ಹಿಂದೂ ಪರಿಷತ್ ಅವತ್ತೇ ಸಹಸ್ರ ಸಂತರಿಂದ ಆಶೀರ್ವದಿಸಲ್ಪಟ್ಟಿತ್ತು! 1964 ರಿಂದಲೂ ಸಹ, ಧರ್ಮಕಾರ್ಯಗಳನ್ನು ಮಾಡುತ್ತಲೇ ಬಂದ ವಿಶ್ವ ಹಿಂದೂ ಪರಿಷತ್, ಅದೆಷ್ಟೋ ಮತಾಂತರವಾದ ಹಿಂದೂಗಳನ್ನು ಮಾತೃಧರ್ಮಕ್ಕೆ ಮರಳಿ.ಕರೆತಂದಿದೆ! ಅದೆಷ್ಟೋ ಕಡೆ, ವೈದ್ಯಕೀಯ ಸೌಲಭ್ಯಗಳನ್ನೇರ್ಪಡಿಸಿದೆ! ಅದೆಷ್ಟೋ, ಕಡೆ ಧರ್ಮಸಂಸದ್ ನನ್ನು ನಡೆಸಿ ಹಿಂದೂ ಸಮಾಜ ಜಾಗೃತವಾಗುವಂತೆ ಮಾಡಿದ್ದು ಹಿಂದೂ ಪರಿಷತ್ ನ ಬದ್ಧತೆಗೆ ಹಿಡಿದ ಕನ್ನಡಿ! 



ಒಂದಷ್ಟನ್ನು ಹೇಳಲೇಬೇಕಿದೆ! ಹಿಂದುತ್ವ ಎನ್ನುವುದೊಂದನ್ನೇ ಆಧಾರವಾಗಿಸಿಕೊಂಡು ಸೈದ್ಧಾಂತಿಕವಾಗಿ ಬದುಕು ರೂಪಿಸಿಕೊಳ್ಳಬಲ್ಲಂತಹ ಹಿಂದೂ ಸಮಾಜದ ಯುವಜನತೆಗೆ ಒಂದಷ್ಟು ಕಿವಿಮಾತುಗಳನ್ನು ಹೇಳಲೇಬೇಕಿದೆ! 

ಸೂಕ್ಷ್ಮವಾಗಿ ಅವಲೋಕಿಸಿ ಒಮ್ಮೆ! ಹಿಂದೂ ಸಮಾಜ ಎನ್ನುವುದೊಂದು ಎತ್ತ ಸಾಗುತ್ತಿದೆ?! ಎನ್ನುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರ ಸಿಗುವುದೆಂದಾದರೆ ಮತ್ತೆ ಪ್ರಶ್ನಿಸಿಕೊಳ್ಳಿ! ನಾನೇನು ಮಾಡುತ್ತಿದ್ದೇನೆ ಹಿಂದೂ ಸಮಾಜಕ್ಕೆ?! ಎಂದು! ಇಷ್ಟು ಮಾಡಿದರೆ, ಏನೇನೂ ಅಲ್ಲದ ಒಬ್ಬ ಹಿಂದೂ ಜಾಗೃತನಾಗುತ್ತಾನೆ! ಸಮಾಜ ನನಗೇನು ಮಾಡಿದೆ ಎನ್ನುವ ಇಂದಿನ ಮಾಮೂಲು ಪ್ರಶ್ನೆಗಳಿಂದ ಓರ್ವ ವ್ಯಕ್ತಿ ಹೊರಬಂದು ಹಿಂದುತ್ವಕ್ಕೆ ನಾನೇನು ಮಾಡಿದ್ದೇನೆ?! ಹಿಂದೂ ಯಾರು?! ಹಿಂದುತ್ವದ ಸಿದ್ಧಾಂತಗಳೇನು?! ಎಂಬಂತಹ ಪ್ರಶ್ನೆಗಳನ್ನು ಇಂದಿನ ಯುವ ಸಮೂಹದ ಮನಸ್ಸಿಗೆ ಎಡತಾಕಿಬಿಟ್ಟರೆ, ನಿಧಾನವಾಗಿ ಹಿಂದೂ ಸಮಾಜ ಮತ್ತೆ ಮತ್ತೆ ಜಾಗೃತಗೊಳ್ಳುತ್ತಲೇ ಸಾಗುತ್ತದೆ! 



ವೈಯುಕ್ತಿಕವಾಗಿ ಹೇಳಬೇಕೆಂದರೆ, ನಾನೇನೂ ಸುಖಾಸುಮ್ಮನೆ 'ನಾನೊಬ್ಬಳು ಹಿಂದೂ' ಎನ್ನುವುದನ್ನು ಒಪ್ಪಿಕೊಂಡವಳಲ್ಲ!  ಪ್ರಶ್ನಿಸಿದ್ದೇನೆ! ನನ್ನೊಳಗಿದ್ದ ಅಂಧಕಾರಕ್ಕೆ ಬೆಳಕ ನೀಡುವ ಪ್ರಯತ್ನ ಮಾಡುತ್ತಲೇ, ಜಗತ್ತನ್ನು ಅರ್ಥೈಸುತ್ತಲೇ, 'ಹಿಂದೂ' ವೆಂಬುವುದನ್ನು ಪೂರ್ಣವಾಗಿ ಅರಿಕೆ ಮಾಡುತ್ತಲೇ., ಕೊನೆಗೊಂದು ದಿನ 'ಹಿಂದುತ್ವ' ಎಂಬುದರ ಸೆಳೆತ ನನ್ನನ್ನಾವರಿಸಿತ್ತು! ಯಾಕೆ ಏನು ಎತ್ತ ಎಂಬ ಪ್ರಶ್ನೆಗೆ ಆಸ್ಪದವನ್ನೇ ಕೊಡದಷ್ಟು ಆತ್ಮದಲ್ಲಿ ಉದ್ದೀಪನ ಗೊಳಿಸಿದ ಆ ಹಿಂದುತ್ವ ಎಂಬುದರಿಂದ ಮತ್ತೆ ನಾ ಹೊರಬರಲಿಲ್ಲ! 

ಮತ್ತೆ ಮತ್ತೆ ಯೋಚಿಸುವಂತೆ ಮಾಡುವುದು ಇವತ್ತಿನ ಹಿಂದೂ ಸಮಾಜದ ಮೇಲಾಗುತ್ತಿರುವಂತಹ ದಾಳಿಗಳು! ಒಂದಷ್ಟು ಹಿಂದೂ ಸಂಘಟನೆಯ ಕಾರ್ಯಕರ್ತರ ಕಗ್ಗೊಲೆಯಾಗುತ್ತದೆ! ಲವ್ ಜಿಹಾದ್ ಎಂಬುದೊಂದಷ್ಟು ನಿಶ್ಯಬ್ದವಾಗಿಯೇ ಹಿಂದೂವಿನ ಮನೆಯ ದೀಪವೊಂದನ್ನು ಇದ್ದಕ್ಕಿದ್ದ ಹಾಗೆ ಆರಿಸಿಬಿಡುತ್ತದೆ! ಇನ್ನೆಲ್ಲೋ, ಆಡಳಿತ ಮಾಡುತ್ತೇನೆಂದವರು ಗದ್ದುಗೆ ಹಿಡಿದು ಕೂತವರು ಎಡಮಗ್ಗಲಲ್ಲಿ ತಿರುಚಲ್ಲಟ್ಟ ಜಾತ್ಯಾತೀತತೆಯ ಸಿದ್ಧಾಂತಗಳನ್ನು ಹಿಡಿದಿರುತ್ತಾರೆ! ಒಟ್ಟಾರೆಯಾಗಿ, ಹಿಂದೂ ಸಮಾಜದ ಮೇಲೆ  ನಿರಂತರ ಆಕ್ರೋಶ! ದಾಳಿ!

ಇಂತಹ ಅದೆಷ್ಟೋ ಕಠಿಣ ಕಹಿ ವಾಸ್ತವಗಳಿದೆಯಲ್ಲವಾ?! ಒಬ್ಬ ಸ್ವಾಭಿಮಾನಿ ಹಿಂದೂವನ್ನು ಕೆರಳಿಸಿಬಿಡುತ್ತದೆ! ಏನಾದರೂ ಮಾಡಲೇಬೇಕೆಂದು ಹೊರಟ ಅಂತಹ ಪ್ರತಿಯೊಬ್ಬ ಹಿಂದೂವಿಗೂ ಕೂಡ, ಶಸ್ತ್ರ ಹಿಡಿಯುವುದಕ್ಕಿಂತ ಮೊದಲು ಶಾಸ್ತ್ರ ಭೋಧಿಸಿದರೆ, ಆತನೊಬ್ಬ ರಾಮನಾಗುತ್ತಾನೆ! ಚಾಣಕ್ಯನಾಗುತ್ತಾನೆ! ಇವತ್ತಿನ ಹಿಂದೂ ಸಮಾಜಕ್ಕೆ 'ಶಾಸ್ತ್ರ ಹಾಗೂ ಶಸ್ತ್ರ' ಎಂಬೆರಡು ಶಕ್ತಿಯ ಅವಶ್ಯಕತೆ ಖಂಡಿತವಾಗಿಯೂ ಇದೆ! 

ಪರಮತದವರು ಮಾಡುತ್ತಿರುವುದೂ ಅದನ್ನೇ ಇವತ್ತು! ಒಬ್ಬ ಮುಸಲ್ಮಾನನನ್ನು ನೋಡಿ! ಆತ ಹುಟ್ಟಿದ ದಿನದಿಂದಲೂ ಕೂಡ, ಆತನನ್ನು ಮದರಸಾಗಳಲ್ಲಿ ಭೋಧಿಸುವ ಧರ್ಮಶಿಕ್ಷಣಕ್ಕೆಡೆ ಮಾಡುತ್ತಾರೆ! ಬಾಲ್ಯದಲ್ಲೇ ಪ್ರಾರಂಭವಾಗುವ ವ್ಯಕ್ತಿ ನಿರ್ಮಾಣ ಭವಿಷ್ಯದಲ್ಲಿ ಸಂಪೂರ್ಣ ಕಟ್ಟರ್ ಮುಸಲ್ಮಾನನಾಗುವಂತೆ ಮಾಡುತ್ತದೆ! ಬಾಲ್ಯದಲ್ಲಿ ಬಗ್ಗಿದಾತ ಭವಿಷ್ಯದಲ್ಲೊಬ್ಬ ಅದೇ 'ಇಸ್ಲಾಮೀಕರಣ' ಎಂಬುವುದನ್ನು ಸಲೀಸಾಗಿ ಒಪ್ಪಿಬಿಡುತ್ತಾನೆ! ಆದರೆ, ಇವತ್ತಿನ ಹಿಂದೂ ಸಮಾಜ?! 

ಅತಶಯೋಕ್ತಿ ಎನ್ನಿಸಬಹುದೇನೋ! ಆದರದು ವಾಸ್ತವ! ಮೇಲ್ಪದರದ ಸಮುದ್ರದ ಅಲೆಗಳಲ್ಲಿ ಇವತ್ತು ನೆಲೆ ನಿಲ್ಲಲು ಹೋರಾಡುತ್ತಿದೆ ಹಿಂದೂ ಸಮಾಜ! ಹಿಂದುತ್ವದ ಆಳವನ್ನು ಬಲ್ಲ ಎಷ್ಟು ಮಂದಿ ಇವತ್ತು ನಮ್ಮಲ್ಲಿ ಕಾಣಸಿಗಬಹುದು?! ಮಾತಿಗೆ ಹಿಂದೂ ಎನ್ನುವವನೊಬ್ಬ ತನ್ನ ಧರ್ಮದ ಬಗ್ಗೆ ಎಷ್ಟು ಅರಿಯುವ ಪ್ರಯತ್ನ ಮಾಡಬಹುದು?! ಭಗವದ್ಗೀತೆಯ ಸಾರ ಅದೆಷ್ಟು ಮಂದಿಗೆ ತಿಳಿದಿರಬಹುದು?! ಹಿಂದೂ ರಾಷ್ಟ್ರದ ಪರಿಕಲ್ಪನೆ ಇವತ್ತು ಅದೆಷ್ಟು ಹಿಂದೂಗಳಿಗಿದೆ?! ಹಿಂದೂಸ್ಥಾನದ ಇತಿಹಾಸದ ಬಗ್ಗೆ ಅದೆಷ್ಟು ಅಧ್ಯಯನ ಮಾಡಿದವರು ಸಿಗಬಲ್ಲರು?! 



ಇದಕ್ಕೆಲ್ಲ ಉತ್ತರ ಕೊಡಬೇಕಾದದ್ದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ! ಕರ್ತವ್ಯ ಮರೆತೆವು! ಪರಿಣಾಮವಾಗಿ, ಹಿಂದೂ ಸಮಾಜದ ಮೇಲಾಗುತ್ತಿರುವ ದಾಳಿಯೊಂದು ಕತ್ತಿ ಖಡ್ಗಳನ್ನೊಳಗೊಂಡಿಲ್ಲ, ಬದಲಾಗಿ ನೇರವಾಗಿ ಸಿದ್ಧಾಂತದ ಮೇಲಾಗುತ್ತಿದೆ ಬೌದ್ಧಿಕ ದಾಳಿ! ಪರಮತದವನೊಬ್ಬನ ಹಿಂದುತ್ವದ ಮೇಲಿನ ಪ್ರಶ್ನೆಗಳಿಗೆ ಇವತ್ತು ಅದೆಷ್ಟು ಹಿಂದೂಗಳು ಉತ್ತರಿಸಬಲ್ಲ ಸಾಮರ್ಥ್ಯ ಹೊಂದಿರಬಲ್ಲರು?! ಹಿಂದೂ ಶಾಸ್ತ್ರಗಳನ್ನು ಪ್ರಶ್ನೆ ಮಾಡುತ್ತಲೇ ಸಾಗುವ ಈ ಅಜೆಂಡಾಗಳು ಎಂತಹ ಹಿಂದೂವನ್ನೂ ತಡೆದು ನಿಲ್ಲಿಸುತ್ತದೆ! ಯಾಕೆಂದರೆ, ಮತ್ತದೇ ಧರ್ಮಶಿಕ್ಷಣದ ಕೊರತೆ! 

ರಾಮನ ಬಗ್ಗೆ ಪ್ರಶ್ನೆ ಮಾಡುತ್ತಾರೆ! ಶಂಭುಕನನ್ನು ಕೆಳವರ್ಗನೆಂಬುವುದಕ್ಕೆ ತಾನೇ ಕೊಂದದ್ದು ಎಂಬ ಪ್ರಶ್ನೆಯನ್ನಿಡುತ್ತಾರೆ! ರಾಮಾಯಣ ಗೊತ್ತಿಲ್ಲದ ಒಬ್ಬ ಹಿಂದೂ ಸಲೀಸಾಗಿ ಸೋಲೊಪ್ಪುತ್ತಾನೆ! ಅಲ್ಲಿಂದಲೇ, ಆತನಿಗೆ ನಾನೊಬ್ಬ ಹಿಂದೂ ಎನ್ನುವುದಕ್ಕಿಂತ ಕೆಳವರ್ಗ ಎಂಬ ಒಡಕು ಮೂಡುತ್ತದೆ! ಮಹಾಭಾರತದ ಬಗ್ಗೆ ಹೆಣ್ಣು ಮಗುವಿಗೆ ಪ್ರಶ್ನಿಸುತ್ತಾರೆ! ದ್ರೌಪದಿಯ ಸೀರೆ ಎಳೆದರೂ ಸುಮ್ಮನಿದ್ದದ್ದು ಯಾಕೆ ನಿಮ್ಮ ಹಿಂದೂ ಸಮಾಜದ ಪಾಂಡವರು?! ಮಹಾಭಾರತದ ಬಗ್ಗೆ ಅರಿವಿಲ್ಲದ ಆ ಹೆಣ್ಣು ಮಗುವಿನಲ್ಲೊಂದು ಕ್ರೋಧ! ಆಕೆಗೆ ನಾನು ಹಿಂದೂ ಸಮಾಜದಲ್ಲಿ ಸುರಕ್ಷಿತವಲ್ಲ ಎಂಬ ಆಲೋಚನೆ ಬಂತೆಂದರೆ ಸಾಕು! ಆಕೆ ಮತ್ತೆ ತಿರುಗಿ ನೋಡಲು ಸಾಧ್ಯವೇ ಇಲ್ಲ! 

ಇಂತಹ ಉದಾಹರಣೆಗಳನ್ನು ಅದೆಷ್ಟೋ ಕೊಡಬಹುದು! ಇವತ್ತಿನ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವಂತಹ ಬೌದ್ಧಿಕ ದಾಳಿ ಹಿಂದುತ್ವದ ಇತಿಹಾಸಕ್ಕೆ ಕೈ ಹಾಕಿದೆ! ಅಂದರೆ, ನೇರವಾಗಿ, ನಮ್ಮ ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದೆ! ನಾಸ್ತಿಕ ಆಸ್ತಿಕರಿಗೆ ಇಬ್ಬರಿಗೂ ಸಮಾನ ಸ್ಥಾನ ಮಾನಗಳನ್ನು ನೀಡಿದ ಹಿಂದೂ ಸಮಾಜ ಎಡವಿದ್ದಲ್ಲಿಯೇ! ದಿನೇ ದಿನೇ ಧರ್ಮದ ವೈಚಾರಿಕತೆಯ ಪರಿಚಯವನ್ನು ಬದಿಗೆ ಸರಿಸುತ್ತಲೇ ನಡೆದೆವಲ್ಲ?! ದಿನೇ ದಿನೇ ಹಿಂದುತ್ವದ ಇತಿಹಾಸವನ್ನು ಅಲ್ಲಿಯೇ ಮರೆತು ಹೆಜ್ಜೆ ಇಡುತ್ತಾ ಬಂದುದರ ಫಲವಾಗಿ ಇವತ್ತು, ಹಿಂದೂವಿಗೆ ಹಿಂದೂವೇ ಶತ್ರು ಎನ್ನುವ ಸ್ಥಿತಿ ಅಷ್ಟೇ!

ಹಿಂದುತ್ವಕ್ಕೋಸ್ಕರ ಮಡಿದಂತಹವರ ಕಥೆಗಳು ಇವತ್ತಿನ ಯುವ ಸಮೂಹಕ್ಕೆ ಅರಿವಿಲ್ಲದ ಕಾರಣ, ಭನ್ಸಾಲಿಯ ಒಂದಷ್ಟು ಸಿನಿಮಾಗಳು ಸತ್ಯವೆನಿಸುತ್ತದೆ! ಯಾರೋ ಒಬ್ಬನ 'ಎಲ್ಲರೂ ಒಂದೇ' ಎನ್ನುವ ಭಾವ ಸಂಪೂರ್ಣವಾಗಿ ಒಬ್ಬ ಹಿಂದೂವನ್ನು 'ಚಲೇಗಾ' ಎನ್ನುವ ಮನಃಸ್ಥಿತಿಗೆ ತಂದು ನಿಲ್ಲಿಸಿಬಿಡುತ್ತದೆ! ತದನಂತರದಲ್ಲಿ, ಆತನ ವಂಶ ಇದೇ 'ಎಲ್ಲಾ ಧರ್ಮವೂ ಒಂದೇ!' ಎನ್ನುವ ಸಿದ್ಧಾಂತದಡಿಯಲ್ಲಿ ಹಿಂದುತ್ವದ ವಿರೋಧಿಯಾಗಿ ಬೆಳೆಯುತ್ತದೆ!  ಇದಕ್ಕೆ ಸಾಕ್ಷಿ ಇವತ್ತಿನ ಸೋಗಲಾಡಿ ಸೆಕ್ಯುಲರ್ ಗಳು! 

ಹಿಂದೂ ಸಮಾಜದ ದುರಂತವೆಂದರೆ ಅದೇ! ಧರ್ಮಶಿಕ್ಷಣದ ಕೊರತೆ! ಪ್ರತಿಷ್ಟೆಯ ಸಲುವಾಗಿ ಮಕ್ಕಳ ವಿದ್ಯಾಭ್ಯಾಸ ಪ್ರಾರಂಭವಾಗುವುದು ಕಾನ್ವೆಂಟ್ ಶಾಲೆಗಳಲ್ಲಿ! ಕ್ರೈಸ್ತ ಮಿಷನರಿಗಳ ವಿದ್ಯಾನಿಲಯಗಳಲ್ಲಿ ಹೇಳಿಕೊಡುವ ಬೈಬಲ್ಲು ನೋಡುತ್ತಲೇ ಆ ಮಗುವಿಗೆ ಭಗವದ್ಗೀತೆಯ ಪರಿಚಯವೇ ಮರೆತು ಹೋಗುತ್ತದೆ! ಇವತ್ತಿನ ಮಕ್ಕಳಿಗೆ ಲಾಲಿ ಹಾಡುವ ಅದೆಷ್ಟೋ ತಾಯಂದಿರಿಗೆ ಹಿಂದುತ್ವದ ಇತಿಹಾಸವನ್ನು ಹೇಳಿಕೊಡಲು ಬೇಸರವೆನಿಸುತ್ತದೆ! 'ಟ್ವಿಂಕಲ್ ಟ್ವಿಂಕಲ್"  ಎಂಬ ಜೋಗುಳ ಕೇಳಿ ಮಲಗಿದ ಮಗುವಿಗೆ 'ಗಾಡ್ ಸೇವ್ಸ್ ದಿ ಕಿಂಗ್" ಎಂಬುದೊಂದು ಹತ್ತಿರವಾಗುವುದರಲ್ಲಿ ಸಂಶಯವೇ ಇಲ್ಲ! 

ತಪ್ಪಿರುವುದು ನಮ್ಮಲ್ಲೇ ಎಂದಾಗ ಸರಿಪಡಿಸುವುದೂ ನಾವೇ ಆಗಬೇಕಲ್ಲವೇ?! 

ಇವತ್ತಿನ ಯುವ ಜನತೆಯ ಪಾತ್ರ ಮುಂದಿನ ಹಿಂದೂ ಸಮಾಜದ ಭವಿಷ್ಯವನ್ನು ನಿರ್ಧರಿಸುತ್ತದೆ! ಇವತ್ತಿನ ಹಿಂದೂ ಸಮಾಜದ ಕಠಿಣ ನಿರ್ಧಾರ ಮುಂದಿನ ಪೀಳಿಗೆಯನ್ನು ಕಾಯುತ್ತದೆ! 'ವ್ಯಕ್ತಿ ನಿರ್ಮಾಣವೇ ದೇಶ ಕಾರ್ಯ' ಎಂಬುವುದೊಂದು ನಂಬಿಕೆ ಹಿಂದೂರಾಷ್ಟ್ರ ದ ಪರಿಕಲ್ಪನೆಯನ್ನು ಇನ್ನೂ ಪಕ್ವವಾಗಿಸುತ್ತದೆ! ಇವತ್ತಿನ ಪ್ರತಿಯೊಬ್ಬ ಯುವ ಹಿಂದೂವಿನ ಕರ್ತವ್ಯವದೇ! ತನ್ನ ತಾ ಪ್ರಶ್ನಿಸಿಕೊಳ್ಳುತ್ತ ಸಾಗುವುದು! 

ನೆನಪಿರಲಿ! ಹಿಂದುತ್ವದ ಜೀವಾಳ ವಿರುವುದೇ ವೇದಶಾಸ್ತ್ರಗಳಲ್ಲಿ! ಹಿಂದೂ ಎಂಬುವವನ ನರನಾಡಿಗಳಲ್ಲಿ ಮಿಂಚಿನ ಸಂಚಾರವಾಗಿದ್ದೂ ಇದೇ ಹಿಂದುತ್ವದ ಸಂತರಿಂದ! ಅದೆಷ್ಟೋ ದಾಳಿಗಳ ನಂತರವೂ ಹಿಂದೂ ಎನ್ನುವೊಬ್ಬ ಉಳಿದುಕೊಂಡಿದ್ದೂ ಇದೇ ಧರ್ಮಗಳ ಬಗೆಗೆ ಮೂಡಿದ ಜಿಜ್ಞಾಸೆಗೆ ಉತ್ತರ ಕಂಡುಕೊಂಡಿದ್ದರಿಂದ! ಇಂತಹ ಶಾಸ್ತ್ರಗಳ ಅಧ್ಯಯನ ಇಂದಿನ ಹಿಂದೂ ಸಮಾಜಕ್ಕೆ ಬಹಳ ಅಗತ್ಯವಿದೆ ಎನ್ನಿಸುವಾಗಲೇ, ವಿಶ್ವ ಹಿಂದೂ ಪರಿಷತ್ ನಡೆಸಿದ 'ಧರ್ಮ ಸಂಸದ್'  ಸಹಸ್ರ ಸಂತರನ್ನು ಒಟ್ಟುಗೂಡಿಸಿ ಹಿಂದುತ್ವದ ಯಜ್ಞವನ್ನು ಹೊತ್ತಿಸುವಲ್ಲಿ ನಿರತವಾಗಿದೆ. ಯಜ್ಞಕ್ಕೆ ಸಮಿಧೆಯಾಗುತ್ತೇವೆಂಬ ಕೋಟಿ ಜನರ ಹಿಂದೂಗಳ ಧರ್ಮಶ್ರದ್ಧೆಯೊಂದು ಮತ್ತೆ ಮತ್ತೆ ಹಿಂದೂಗಳನ್ನು ಕಾಯುತ್ತಲೇ ನಡೆಯುತ್ತದೆ! ಈ ಬದ್ಧತೆ ನಮಗಿರಬೇಕಷ್ಟೇ!

- ಸುಶ್ಮಿತಾ ಸಪ್ತರ್ಷಿ 
ಕೃಪೆ : ವಿಕ್ರಮ ವಾರ ಪತ್ರಿಕೆ

Comments

Popular posts from this blog

"ಅಹಿಂಸಾ ಪರಮೋ ಧರ್ಮ" ಸರಿ. ಆದರೆ ಅದರ ಮುಂದಿನ ವಾಕ್ಯವನ್ನು ಪಾಲಿಸಲೂ ನಾವು ಸಿದ್ಧರೆಂಬುದನ್ನು ಮರೆಯಬೇಡಿ!!!

ಶಿವರಾತ್ರಿ ವಿಶೇಷ: ಮಹಾಶಿವ ಕಾಶಿಯಲ್ಲಿ ನೆಲಿಸಿದ್ದು ಯಾಕೆ??

ಬದಕೆಂಬುದು ನಿಜವಾಗಿಯೂ ಇಷ್ಟೆನಾ ಎನಿಸಿಬಿಡುತ್ತೆ!!ಆದರೆ!!