ಮತ್ತೆ ಬಂತು ನವೆಂಬರ್ ಹತ್ತು.. ಈ ಬಾರಿ ಏನಿದೆಯೋ ಆಪತ್ತು.!

     ಇವತ್ತು ಬೆಳಿಗ್ಗೆಯಿಂದ ಫೇಸ್ ಬುಕ್ಅಲ್ಲಿ ಕಣ್ಣಾಡಿಸಿದಾಗಲೆಲ್ಲಾ ಕಂಡ ವಿಷಯ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರು ನವೆಂಬರ್ ನಲ್ಲಿ ನಡೆಯಲಿರುವ ಟಿಪ್ಪು ಜಯಂತಿಯ ಆಹ್ವಾನಪತ್ರಿಕೆಯಲ್ಲಿ ತನ್ನ ಹೆಸರನ್ನು ನಮೂದಿಸಬಾರದು ಎಂದು ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನೇ ದೊಡ್ಡ ವಿಷಯವನ್ನಾಗಿಸಿ ಕೆಲವು ಖಾಸಗೀ ಮಾಧ್ಯಮಗಳು ತಮ್ಮ ಓತಪ್ರೋತ ನಿರ್ಣಯವನ್ನು ಪದೇ ಪದೇ ಪುನರುಚ್ಛರಿಸಿ ಗೊಂದಲ ಎಬ್ಬಿಸಿದವು. ಕಳೆದೆರಡು ವರ್ಷಗಳಿಂದಲೂ ಸರ್ಕಾರ ಬಹುಸಂಖ್ಯಾತ ವಿರೋಧದ ನಡುವೆಯೂ ತನ್ನ ಹಟ ಸಾಧಿಸಲಿಕ್ಕಾಗಿ ಮತ್ತು ಒಂದು ಕೋಮಿನ ಓಲೈಕೆಗಾಗಿ ನಡೆಸಿಕೊಂಡುಬಂದಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಅನಂತಕುಮಾರರು ಕಳುಹಿಸಿದ ಮನವಿ ಯಾಕೆ ಇಷ್ಟು ಪ್ರಾಮುಖ್ಯತೆ ಪಡೆಯಿತು ಎಂದು ಆಲೋಚಿಸುತ್ತಿದ್ದೆ. ಕಾರಣ ತಿಳಿಯದಿರಲಿಲ್ಲ. ಸಂಸದರಾಗಿದ್ದ ಹೆಗಡೆಯವರು ಸಚಿವರಾಗಿದ್ದಾರೆ. ಹಿಂದೂ ಸಂಸ್ಕೃತಿಯ ಪ್ರಬಲ ಪ್ರತಿಪಾದಕರಾದವರು ಸಣ್ಣದೊಂದು ಹೇಳಿಕೆ ಕೊಟ್ಟುಬಿಟ್ಟರೆ ಮಾನಗೇಡಿ ಮಾಧ್ಯಮಗಳಿಗೆ ಹಬ್ಬದೂಟ. ಅದನ್ನೇ ಹಿಡಿದು ತಿಕ್ಕಾಡಿ ಮಾಡಿಬಿಡುತ್ತಾರೆ. ಇನ್ನು ಇಷ್ಟು ಸಾಕಾಗುವುದಲ್ಲಾ. 'ಇಸ್ಲಾಂ ಧರ್ಮಕ್ಕೆ ಸಚಿವರಿಂದ ಅವಮಾನ..?' ಎಂಬ ಶೀರ್ಷಿಕೆಯಡಿಯಲ್ಲಿ ವೀಡಿಯೋ ಹರಿದಾಡತೊಡಗಿತು. ಟಿಪ್ಪು ಜಯಂತಿಗೆ ದಿನಗಳಿರುವಾಗಲೇ ಅಖಾಡ ರಂಗೇರುತ್ತಿರುವುದನ್ನು ಕಂಡು ಅಯ್ಯೋ ಅನ್ನಿಸುತ್ತಿದೆ. ಮುಂದೇನಾಗುತ್ತದೆ ಕಾದು ನೋಡಬೇಕು.

    ಹೆಗಡೆಯವರು ಹೀಗೆ ಹೆಳಿದ್ದು ಮೊದಲೇನಲ್ಲ. ಹಿಂದಿನ ಸಾರಿಯೂ ಇದೇ ರೀತಿ ತಮ್ಮ ನಿರ್ಧಾರ ತಿಳಿಸಿ ಪತ್ರ ಬರೆದಿದ್ದರು. ಆದರೆ ಮಾಧ್ಯಮಗಳಿಗೆ ಆಹಾರವಾಗುವಷ್ಟು ಹೆಗಡೆಯವರು ಬೆಳೆದಿರಲಿಲ್ಲ. ಈಗ ಸಚಿವ ಸ್ಥಾನ ದೊರಕಿರುವುದರಿಂದ ಮಾಧ್ಯಮಗಳ ಕಣ್ಣು ಅವರ ಪ್ರತಿ ಮಾತಿಗೂ ದೊಡ್ಡದಾಗುತ್ತದೆ.


        ಹೆಗಡೆಯವರ ವಿಷಯ ಬಿಟ್ಟುಬಿಡೋಣ. ಟಿಪ್ಪು ಜಯಂತಿಯ ಸಂದರ್ಭದಲ್ಲಿ ಪ್ರತಿ ವರ್ಷವೂ ಯಾಕಿಷ್ಟು ಗೊಂದಲ, ಗಲಭೆ, ವಿವಾದಗಳಾಗುತ್ತವೆ? ಕಾರಣ ಒಂದೇ,ಸರ್ಕಾರ.! ಯಾವುದೇ ಪಕ್ಷದ ಪ್ರತಿನಿಧಿಯಾಗಲ್ಲದೇ, ಸಾಮಾನ್ಯ ನಾಗರಿಕನಾಗಿ ವಿಚಾರಮಾಡಿದಾಗಲೂ ಸರ್ಕಾರದ ಮೊಂಡುತನ ಕಣ್ಣಿಗೆ ಕಾಣುತ್ತದೆ. ಮೊದಲನೇ ವರ್ಷ ಸರ್ಕಾರ ಜಯಂತಿ ಆಚರಣೆ ಮಾಡಬೇಕೆಂದು ನಿರ್ಧರಿಸಿದಾಗ ದೀಪಾವಳಿ ಹಬ್ಬದ ಸಮಯ. ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗುವ ಹಾಗೆ ಆಚರಣೆ ಮಾಡಹೊರಟ ಸರ್ಕಾರ ತನ್ನ ಹಟದಿಂದಲೇ ಸಾಮಾನ್ಯರನ್ನು ರೊಚ್ಚಿಗೆಬ್ಬಿಸಿತ್ತು. ಕೊಡವರು, ಮಂಡ್ಯ ಪ್ರಾಂತ್ಯದ ಅಯ್ಯಂಗಾರಿಗಳು ತಮ್ಮ ಪ್ರತಿಭಟನೆಯ ಮೂಲಕ ಆವೇಶ ಹೊರಹಾಕಿದ್ದರು. ಕೊಡಗಿನಲ್ಲಿ ಕುಟ್ಟಪ್ಪ ಅವರ ಕೊಲೆಯಾದದ್ದು, ಪ್ರತಿಭಟನೆ ಹತ್ತಿಕ್ಕಲು ಕೇರಳ ರಾಜ್ಯದಿಂದ ಗೂಂಡಾಗಳನ್ನು ತಂದದ್ದು, ಕೊಲೆಯಿರಬಹುದೆಂಬ ಅನುಮಾನವನ್ನೂ ಪರಿಗಣಿಸದೇ ಜಾರಿಬಿದ್ದು ಸತ್ತದ್ದೆಂಬ ನಿರ್ಣಯ ನೀಡಿ ಕೇಸ್ ಮುಚ್ಚಿಹಾಕಿದ್ದು, ಇವೆಲ್ಲ ಸರ್ಕಾರದ ಮೇಲೆ ಜನರಿಗೆ ರೇಜಿಗೆ ಹುಟ್ಟಿಸುವಂತೆ ಮಾಡಿತ್ತು. ಇಷ್ಟಾದರೂ ಹಟ ಬಿಡದ ಸರ್ಕಾರ ತನ್ನ ಅಭಿಲಾಶೆಯಂತೆ ಜಯಂತಿ ಆಚರಿಸಿಯೇಬಿಟ್ಟಿತು. ಅಂದಹಾಗೆ ಆ ವರ್ಷ ಆಚರಣೆಯಾದ ದಿನಾಂಕ, ನವೆಂಬರ್ ೧೦.


     ಯಾಕಿಷ್ಟು ವಿರೋಧ ಟಿಪ್ಪು ಜಯಂತಿಗೇ ಆಗುತ್ತದೆ ಎಂಬ ಅನುಮಾನವಿದ್ದರೆ ಖಂಡಿತಾ ಅದಕ್ಕೆ ಉತ್ತರ ಟಿಪ್ಪು ಇತಿಹಾಸದಲ್ಲಿ ಇವತ್ತಿಗೂ ಒಂದು ಪ್ರಶ್ನಾರ್ಥಕ ಚಿನ್ಹೆ. ಟಿಪ್ಪುವಿನ ಸಮರ್ಥಕರು ಹಾಗೂ ವಿರೋಧಿಗಳು ಇಬ್ಬರ ಅಭಿಪ್ರಾಯವೂ ವಿಭಿನ್ನ ಮತ್ತು ಪುರಾವೆಯಿಲ್ಲ. ಟಿಪ್ಪುವಿನ ಬಗ್ಗೆ ಗೂಗಲ್ ಮಾಡಿದರೆ, ಗೂಗಲ್ ನ ಪ್ರಕಾರ ಟಿಪ್ಪು ಹುಟ್ಟಿದ್ದು ನವೆಂಬರ್ ೨೦ ಕ್ಕೆ. ಮೊದಲೇ ಹೇಳಿದೆನಲ್ಲಾ, ನಮ್ಮ ಘನ ಸರ್ಕಾರ  ಆಚರಣೆ ಮಾಡುವುದು ನವೆಂಬರ್ ೧೦ಕ್ಕೆ. ತಿಥಿ ಪ್ರಕಾರ ಆಚರಣೆ ನಡೆಯುತ್ತಿದೆ ಎನ್ನಲು ಆತ ಪುರೋಹಿತಶಾಹಿಯಂತೂ ಅಲ್ಲವೇ ಅಲ್ಲ. ಹಾಗೂ ಪುರೋಹಿತಶಾಹಿಯ ಪ್ರಕಾರ ಒಂದು ತಿಥಿ ಒಂದೇ ಇಂಗ್ಲೀಷ್ ತಿಂಗಳಿನ ದಿನ ಬರುವುದೂ ಇಲ್ಲ. ಈ ವಿಷಯ ಯಾರೂ ಪ್ರಶ್ನಿಸುವುದಿಲ್ಲ. ಓಟ್ಟಿನಲ್ಲಿ ಸರ್ಕಾರಕ್ಕೆ ಆಚರಣೆಯ ನೆಪದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುವ ಅವಶ್ಯಕತೆಯಿತ್ತು. ಪ್ರತಿವರ್ಷದಂತೆ ಈವರ್ಷವೂ ಕೂಡಾ ಯಾವುದೇ ವಿಘ್ನವಿಲ್ಲದೇ ಹಾಕಿದ ಬೇಳೆ ಬೇಯುತ್ತದೆ, ಕರಗುತ್ತದೆ.! ಅನುಮಾನವೇ ಇಲ್ಲ.

     ಮೊದಲಿನಿಂದಲೂ ನಮ್ಮಲ್ಲಿ ನಡೆದುಬಂದಿರುವುದೇ ಹೀಗೆ. ಯಾವ ಸರ್ಕಾರವಾದರೂ ಇದೇ ಗತಿ. ಓಲೈಕೆಯ ನೆಪದಲ್ಲಿ ಆಚರಣೆಗಳನ್ನು ಮಾಡುವುದು, ಬಡವರ ಉದ್ಧಾರದ ನೆಪದಲ್ಲಿ ಸವಲತ್ತುಗಳನ್ನು ಉಚಿತವಾಗಿ ಕೊಡುವುದು, ಸರ್ಕಾರದ ಬೊಕ್ಕಸ ಬರಿದಾದಾಗ ಕೇಂದ್ರದಿಂದ ಸಾಲ ಮಾಡುವುದು, ತಮ್ಮದೇ ಯೋಜನೆಗಳೆಂಬಂತೆ ಕೇಂದ್ರದ ಯೋಜನೆಗಳನ್ನು ಜನರ ಮುಂದೆ ಇಡುವುದು, ತಮ್ಮದೇ ಭಟ್ಟಂಗಿಗಳ ಗುಂಪೊಂದನ್ನು ಪೋಷಿಸಿ ಜನರ ದಾರಿ ತಪ್ಪಿಸುವುದು, ಗೂಂಡಾಗಳನ್ನು, ಭ್ರಷ್ಟರ ಅನುಕೂಲಕ್ಕೆ ತಕ್ಕ ಕಾಯಿದೆಗಳನ್ನು ತಂದು ಅವರ ಹೊಟ್ಟೆ ಹೊರೆಯುವುದು ಹೊಸತೇನಲ್ಲ. ಯಾವ ಸರ್ಕಾರವಾದರೂ ನಮ್ಮಲ್ಲಿ ನಡೆದುಕೊಂಡು ಬಂದಿರುವ ಸರ್ವೇ ಸಾಧಾರಣ ಕ್ರಿಯೆಯಿದು. ಆದರೆ ಜನಸಾಮಾನ್ಯರ ವಿರೋಧ ಕಣ್ಣಿಗೆ ಕಂಡರೂ ಜನರನ್ನು ಮರಳು ಮಾಡಬಹುದೆಂಬ ದುರುದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದರೂ ಏನೂ ಮಾಡಲಾಗದೇ ಇರುವ ಪರಿಸ್ಥಿತಿ ನಾಗರಿಕರದ್ದು.

       ಹಾಗಾದರೆ ಟಿಪ್ಪುವಿಗೇ ಈ ವಿರೋಧ ಯಾಕೆ.? ಬೇರೆಯವರಿಗೆ ಯಾಕಿಲ್ಲ? ಎಂಬುದು ಕೆಲವು ಸಂಶೋಧಕವರ್ಗದ ಅಂಬೋಣ. ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ನಿರ್ದಿಷ್ಟ ಪರಿಕಲ್ಪನೆಯಿಲ್ಲದಿದ್ದಾಗ ಮತ್ತು ಋಣಾತ್ಮಕ ಚಿಂತನೆಗಳು ಆ ವ್ಯಕ್ತಿಯ ಬಗ್ಗೆ ಇದ್ದಾಗ ಆತನ ವ್ಯಕ್ತಿತ್ವದ ಅತಿರಂಜಕತೆಯನ್ನು ಪ್ರಾಮಾಣಿಕ ಮನಸ್ಸು ಸ್ವೀಕರಿಸುವುದಿಲ್ಲ;ವೈಯಕ್ತಿಕವಾಗಿ ಆತ ಸದ್ಗುಣ ಸಂಪನ್ನನೇ ಆಗಿದ್ದರೂ. ಅಲಿಖಿತ ಇತಿಹಾಸ ಇವತ್ತಿಗೂ ಟಿಪ್ಪು ಸುಲ್ತಾನನನ್ನು ಮತಾಂಧನಾಗಿಯೇ ಬಿಂಬಿಸುತ್ತದೆ. ಸ್ವಾತಂತ್ರ್ಯಾನಂತರ ನಮ್ಮ ಇತಿಹಾಸ ಅದೆಷ್ಟೊ ವಿಷಯಗಳಲ್ಲಿ ತಿರುಚಲ್ಪಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ಟಿಪ್ಪು ಸುಲ್ತಾನನ ಬಗ್ಗೆ ಇರುವ ಋಣಾತ್ಮಕ ಅಭಿಪ್ರಾಯಗಳು ಆತನ ಮೇಲೆ ಗೌರವವನ್ನಂತೂ ಹೆಚ್ಚಿಸುವುದಿಲ್ಲ. ಕೊಡಗಿನಲ್ಲಿ ಆತ ನಡೆಸಿರುವ ಕ್ರೌರ್ಯಕ್ಕೆ ಇವತ್ತಿಗು ಅಲ್ಲಿನ ಜನ ಅವನನ್ನು ದ್ವೇಷಿಸುತ್ತಾರೆ. ಆತನ ಕ್ರೌರ್ಯದ ಬಗ್ಗೆ, ನಡೆಸಿದ ಹಿಂಸಾಚಾರದ ಬಗ್ಗೆ ಅದೆಷ್ಟೋ ಜನಪದ ಹಾಡುಗಳು ಜನಪದರ ಬಾಯಲ್ಲಿ ಹರಿದಾಡುತ್ತಿದೆ. ಆತ ನಡೆಸಿದ ಮತಾಂತರಗಳ ಬಗ್ಗೆ ಹಲವಾರು ಪುರಾವೆಗಳು ಕೆದಕಿದರೆ ಸಿಗಬಹುದೇನೋ. ಸ್ವತ: ಪೋರ್ಚುಗಲ್ನ ಇತಿಹಾಸಕಾರನೇ ಟಿಪ್ಪು ನಡೆಸಿದ ಮತಾಂಧ ಕ್ರೌರ್ಯಗಳ ಕುರಿತಾಗಿ ಉಲ್ಲೇಖಿಸುತ್ತಾನೆ. 



      ಹಿಂದೂ ಹಾಗೂ ಕ್ರಿಶ್ಚಿಯನ್ ಹುಡುಗಿಯರು ಮುಸಲ್ಮಾನರನ್ನು ವರಿಸಬೇಕು. ಇಲ್ಲವಾದಲ್ಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಗುತ್ತಿತ್ತು. ವಿರೋಧಿಸಿದವರನ್ನು ಬೆತ್ತಲೆಯಾಗಿಸಿ ಆನೆಗಳ ಕಾಲಿಗೆ ಅವರನ್ನು ಕಟ್ಟಿ ಅವರ ದೇಹ ತುಂಡು ತುಂಡಾಗುವಲ್ಲಿಯವರೆಗೆ ಆನೆಗಳನ್ನು ನಡೆಸಲಾಗುತ್ತಿತ್ತು. ಅನೇಕರನ್ನು ಗಲ್ಲಿಗೇರಿಸಲಾಗುತ್ತಿತ್ತು.

    ಈ ಎಲ್ಲಾ ಕಾರಣಗಳಿಂದಲೇ ಟಿಪ್ಪು ಜಯಂತಿ ಅಸಂಬದ್ಧ ಎನಿಸುತ್ತದೆ. 

      ತಿರುಚಲ್ಪಟ್ಟ ಭಾರತದ ಇತಿಹಾಸ ಇವತ್ತಿಗೂ ನಮಗೆ ಟಿಪ್ಪುವನ್ನು ತೋರಿಸುವುದು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿ. ಆದರೆ ಆತ ಹೋರಾಟ ಮಾಡಿದ್ದು ತನ್ನ ಸಂಸ್ಥಾನವನ್ನು, ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಮಾತ್ರ ಹೊರತಾಗಿ ದೇಶದ ಸಲುವಾಗಿ ಅಲ್ಲ ಎಂಬುದನ್ನು ಯಾವೊಬ್ಬ ಇತಿಹಾಸಕಾರನೂ ಹೇಳುವುದೇ ಇಲ್ಲ. ಯಾಕೆಂದರೆ ಬ್ರಿಟಿಷರ ತೆರಿಗೆ ಪದ್ಧತಿ, ಆಡಳಿತ, ಟಿಪ್ಪುವಿನ ಆಡಳಿತಕ್ಕಿಂತ ಉತ್ತಮವಾಗೇ ಇದ್ದವು. ಹೀಗಿರುವಾಗ ಟಿಪ್ಪುವಿಗೆ ತನ್ನ ಸಿಂಹಾಸನ ಉಳಿಸಿಕೊಳ್ಳುವುದೊಂದೇ ಆ ಹೋರಾಟಕ್ಕೆ ಕಾರಣವಾಗಿದ್ದಲ್ಲದೇ ಇನ್ನೇನೂ ಇಲ್ಲ. ತನ್ನ ಮಕ್ಕಳನ್ನು ಆತ ಅಡವಿಟ್ಟದ್ದೂ ಇದೇ ಕಾರಣಕ್ಕೇ. ಮೊನ್ನೆ ಯಾರೋ ಖಾವಿದಾರಿಯೊಬ್ಬ ಗಾಂಧಿ, ಸುಭಾಷ್, ಭಗತ್ ಸಿಂಹರು ತಮ್ಮ ಮಕ್ಕಳನ್ನು ಅಡವಿಡಲಿಲ್ಲ, ಹೀಗಾಗಿ ಅವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎಂದುಬಿಟ್ಟ. ಟಿಪ್ಪು ಮಾತ್ರ ಒಬ್ಬ ಅಪ್ರತಿಮ ದೇಶಭಕ್ತ ಎಂದ ಅವನಿಗೆ ನೆಹರೂ ಕೂಡಾ ತನ್ನ ಮಕ್ಕಳನ್ನು ಅಡವಿಟ್ಟಿರಲಿಲ್ಲ ಎಂಬುದು ನೆನಪಿಲ್ಲವಾಗಿತ್ತೇನೋ, ಅದು ಬೇರೆ ವಿಷಯ.ಆದರೆ ಇವತ್ತಿಗೂ ಟಿಪ್ಪು ಮಕ್ಕಳನ್ನು ಅಡವಿಟ್ಟ ಮತ್ತು ಆಂಗ್ಲರ ವಿರುದ್ಧ ಹೋರಾಡಿದ ಅನ್ನೋದನ್ಬ್ನು ಬಿಟ್ಟರೆ, ಆತನನ್ನು ಸ್ಮರಿಸಲು ಬೇರೆ ಕಾರಣವಂತೂ ನೆನಪಾಗುವುದಿಲ್ಲ.

   ಅಂತೂ ಇಂತೂ ಸರ್ಕಾರ ಪ್ರತಿ ವರ್ಷದಂತೆ ಈ ವರ್ಷವೂ ಸರ್ವ ಸಮ್ಮತವಲ್ಲದ ಆಚರಣೆಯೊಂದನ್ನು ಮಾಡ ಹೊರಟಿದೆ. ತಕರಾರೇನೂ ಇಲ್ಲ. ಮಾಡಿದರೂ ಫಲಿಸುವುದಿಲ್ಲ. ಆದರೆ ಟಿಪ್ಪುವಿನ ಬದಲು ನಾಲ್ವಡಿ ಕೃಷ್ಣರಾಜರಂಥ ಉದಾರಿಗಳೋ, ಕೆಂಪೇಗೌಡರಂಥ ಮಹಾನ್ ವ್ಯಕ್ತಿಗಳೋ ಆ ಆಚರಣೆಯ ಭಾಗವಾಗಿದ್ದರೆ ಆ ಆಚರಣೆಗೊಂದು ಅರ್ಥ ಬರುತ್ತಿತ್ತು. ಟಿಪ್ಪು ಮುಸಲ್ಮಾನ ಅನ್ನೋ ಕಾರಣಕ್ಕೆ ಹಿಂದೂಗಳು ವಿರೋಧಿಸುತ್ತಾರೆ ಎಂದು ಅಬ್ಬರಿಸಿ ಬೊಬ್ಬಿರಿಯುವ ಪ್ರಗತಿಪರರ ಗಮನಕ್ಕೆ, ಅದೇ ಮೈಸೂರ್ ಸಂಸ್ಥಾನಕ್ಕೆ ಸೇವೆ ಸಲ್ಲಿಸಿದ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರನ್ನ ಇಡೀ ಕನ್ನಡ ಸಮುದಾಯ ಇವತ್ತಿಗೂ ಸ್ಮರಿಸುತ್ತದೆ. ಸ್ಮರಣೆ - ಸಂಸ್ಮರಣೆಗಳು ವ್ಯಕ್ತಿ ಮಾಡುವ ಉತ್ತಮ ಕಾರ್ಯದ ಮೇಲೆ ಅವಲಂಬಿತ ಎಂಬುದು ನನ್ನ ವೈಯಕ್ತಿಕ ನಂಬಿಕೆ. ಎಷ್ಟೆ ವಾದ ವಿವಾದಗಳಿದ್ದರೂ ಮೊಂಡು ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಇದು ತಿಳಿದಿರುವ ವಿಚಾರವಷ್ಟೇ. ಆದರೆ, ವಿವಾದಿತ ಕಾರ್ಯಕ್ರಮದಲ್ಲಿ ತಾನು ಭಾಗವಹಿಸುವುದಿಲ್ಲ ಮತ್ತು ನನ್ನ ಹೆಸರು ಮುದ್ರಿಸುವುದು ಬೇಡ ಎಂದು ಖಡಾಖಂಡಿತವಾಗಿ ಹೇಳುವ ಜನನಾಯಕನೊಬ್ಬನನ್ನು, ಅವಕಾಶವಾದಿ ರಾಜಕಾರಣಿಗಳ ಮಧ್ಯ ಕಂಡಾಗ ಹೆಮ್ಮೆಯಾಯಿತು. ಈ ಮಾತುಗಳನ್ನು ಗೀಚಬೇಕೆನಿಸಿತು.

                                                                                  - ಶಿವಪ್ರಸಾದ ಭಟ್ಟ, ಶಾಸ್ತ್ರೀ

Comments

Popular posts from this blog

"ಅಹಿಂಸಾ ಪರಮೋ ಧರ್ಮ" ಸರಿ. ಆದರೆ ಅದರ ಮುಂದಿನ ವಾಕ್ಯವನ್ನು ಪಾಲಿಸಲೂ ನಾವು ಸಿದ್ಧರೆಂಬುದನ್ನು ಮರೆಯಬೇಡಿ!!!

ಶಿವರಾತ್ರಿ ವಿಶೇಷ: ಮಹಾಶಿವ ಕಾಶಿಯಲ್ಲಿ ನೆಲಿಸಿದ್ದು ಯಾಕೆ??

ಬದಕೆಂಬುದು ನಿಜವಾಗಿಯೂ ಇಷ್ಟೆನಾ ಎನಿಸಿಬಿಡುತ್ತೆ!!ಆದರೆ!!